ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ 3 ಗಂಟೆ ತಡವಾಗಿ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್, ಸುಪ್ರೀಂಕೋರ್ಟ್ ಒಂದು ವಿಧಾನಸಭಾ ವ್ಯಾಪ್ತಿಯ 5 ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳಲ್ಲಿ ಬಿದ್ದ ಮತಗಳನ್ನು ತಾಳೆ ಮಾಡಬೇಕು ಎಂದು ಆದೇಶಿಸಿದೆ ಹೀಗಾಗಿ ಫಲಿತಾಂಶ ಪ್ರಕಟ ಮೂರು ಗಂಟೆ ತಡವಾಗಬಹುದು ಎಂದು ಹೇಳಿದರು.

ಆಯೋಗವು ಒಂದು ವಿಧಾನಸಭಾ ಕ್ಷೇತ್ರ ಒಂದು ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳನ್ನು ತಾಳೆ ಮಾಡಲಾಗುವುದು ಎಂದು ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇವಿಎಂ ಬಳಕೆಯ ಕುರಿತು ಸುಪ್ರೀಂಕೋರ್ಟ್ ಗೆ ದೇಶದ 21 ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ಈ ವೇಳೆ ಚುನಾವಣಾ ಕ್ಷೇತ್ರದ ಶೇ. 50 ರಷ್ಟು ಇವಿಎಂಗಳನ್ನು ವಿವಿಪ್ಯಾಟ್ ನೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿತ್ತು.