ಸಾಣೇಹಳ್ಳಿ: ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಪೀಠಾಧ್ಯಕ್ಷರಾದ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಇಂದು ರಾಜ್ಯ ಸರಕಾರ ನ್ಯಾ. ನಾಗಮೋಹನದಾಸ್ ಸಮಿತಿ ವರದಿಯ ಅನುಸಾರ ಲಿಂಗಾಯತ ಮತ್ತು ವೀರಶೈವರಾಗಿದ್ದು ಬಸವ ತತ್ವವನ್ನು ಅನುಸರಿಸುತ್ತಿರುವವರಿಗೆ ‘ಲಿಂಗಾಯತ ಸ್ವತಂತ್ರ ಧರ್ಮ’ ಕುರಿತಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ತೀರ್ಮಾನ ಕೈಗೊಂಡಿರುವುದು ಅತ್ಯಂತ ಸೂಕ್ತವಾಗಿದೆ. ದಶಕಗಳ ಹೋರಾಟಕ್ಕೆ ಸರಕಾರದ ಬೆಂಬಲ ಸಿಕ್ಕಂತಾಗಿದೆ. ಈ ಹೋರಾಟದ ಹಿನ್ನೆಲೆಯಲ್ಲಿ ಶ್ರಮಿಸಿದ ಮಠಾಧೀಶರಿಗೆ, ರಾಜಕೀಯ ನೇತಾರರಿಗೆ, ಬಸವಪ್ರೇಮಿಗಳಿಗೆ ಮತ್ತು ಹೋರಾಟವನ್ನು ಬೆಂಬಲಿಸಿದ ರಾಜ್ಯ ಸರಕಾರಕ್ಕೆ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಅಭಿನಂದನೆಗಳು. ಯುಗಾದಿ ಹಬ್ಬದ ದಿನವೇ ಶಿಫಾರಸ್ಸಿನ ಕ್ರಮಕೈಗೊಂಡು ಲಿಂಗಾಯತರಿಗೆ ಹಬ್ಬದ ಕೊಡುಗೆ ಕೊಟ್ಟಂತಾಗಿದೆ. ಕೇಂದ್ರ ಸರಕಾರವೂ ಕೂಡ ಈ ಶಿಪಾರಸ್ಸನ್ನು ಮನ್ನಿಸಿ ಸ್ವತಂತ್ರ ‘ಲಿಂಗಾಯತ’ ಧರ್ಮವನ್ನಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.