ಹೈದರಾಬಾದ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿ, ಕಾಣಿಕೆಯ ಮೊತ್ತವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಕಾರಣ ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಂತೆ.

ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ಇಟ್ಟಿರುವ 12,000 ಕೋಟಿ ರೂ.ಗಳ ಠೇವಣಿಯ ಮಾಸಿಕ ಬಡ್ಡಿ ದರವನ್ನು ವಿತ್‌ಡ್ರಾ ಮಾಡಲು ಟಿಟಿಡಿ ನಿರ್ಧರಿಸಿದೆ. ಟಿಟಿಡಿ ಟ್ರಸ್ಟ್‌ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈವರೆಗೆ ಟ್ರಸ್ಟ್‌ ಮೂರು,6 ಮತ್ತು ವರ್ಷಕ್ಕೊಮ್ಮೆ ನಗದನ್ನು ಬ್ಯಾಂಕುಗಳಲ್ಲಿ ಠೇವಣಿ ರೂಪದಲ್ಲಿ ಇಡುತ್ತಾ ಬಂದಿದೆ. ಠೇವಣಿಯ ಮೆಚ್ಯುರಿಟಿ ಅವಧಿ ಮುಗಿದ ಬಳಿಕವೇ ಬಡ್ಡಿಯನ್ನು ಪಡೆಯುತ್ತಿತ್ತು. ಆದರೆ, ಈಗ ಈ ಎಲ್ಲ ಠೇವಣಿಯ ಬಡ್ಡಿಯನ್ನು ಮಾಸಿಕವಾಗಿ ಪಡೆಯಲು ಟ್ರಸ್ಟ್‌ ನಿರ್ಧರಿಸಿದೆ ಎನ್ನಲಾಗಿದೆ. ಈ ಮೊತ್ತವನ್ನು ದೇವಸ್ಥಾನದ ಸಿಬಂದಿಗೆ ವೇತನ ಪಾವತಿಸಲು, ತಿರುಪತಿ ತಿಮ್ಮಪ್ಪನ ಪೂಜೆ-ಪುನಸ್ಕಾರದಂಥ ವಿಧಿವಿಧಾನಗಳನ್ನು ನೆರವೇರಿಸಲು ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಲು ವ್ಯಯಿಸಲಾಗುತ್ತದೆ ಎಂದು ಟ್ರಸ್ಟ್‌ ಮಂಡಳಿ ಮುಖ್ಯಸ್ಥರಾದ ವೈ.ವಿ. ಸುಬ್ಟಾರೆಡ್ಡಿ ತಿಳಿಸಿದ್ದಾರೆ.