ಚಿತ್ರದುರ್ಗ: ರೆಫೆಲ್ ಯುದ್ದ ವಿಮಾನ ಖರೀಧಿಯಲ್ಲಿ ಬಿಜೆಪಿ. 41 ಸಾವಿರ ಕೋಟಿ ರೂ.ಲೂಟಿ ಹೊಡೆದಿರುವುದನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ರೆಫೆಲ್ ಹಗರಣದ ತನಿಖೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶಭಕ್ತಿ, ರಾಷ್ಟ್ರಭಕ್ತಿ ಎನ್ನುವವರು ದೇಶದ ರಕ್ಷಣೆ ಹೆಸರಿನಲ್ಲಿ ಯುದ್ದವಿಮಾನ ಖರೀಧಿಸುವಾಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದೇಶದ ಜನತೆಗೆ ವಂಚನೆ ಮಾಡಿದ್ದಾರೆ. ಯು.ಪಿ.ಎ.ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್‍ಸಿಂಗ್ 2012 ರಲ್ಲಿ ಫ್ರಾನ್ಸ್ ಜೊತೆ ಮಾಡಿಕೊಂಡ ಒಪ್ಪಂದದಂತೆ 526 ಕೋಟಿ ರೂ.ಗೆ ಒಂದು ವಿಮಾನದಂತೆ 126 ರೆಫೆಲ್ ಯುದ್ದ ವಿಮಾನ ಖರೀಧಿಸಲು ತೀರ್ಮಾನಿಸಿತು.2014 ರಲ್ಲಿ ದೇಶದ ಪ್ರಧಾನಿಯಾದ ನರೇಂದ್ರಮೋದಿ ಒಂದು ವಿಮಾನಕ್ಕೆ 1760 ಕೋಟಿ ರೂ.ನಂತೆ 36 ವಿಮಾನ ಖರೀಧಿ ಮಾಡಿ. ಭ್ರಷ್ಟಾಚಾರ್ ನಯಿ ಕರೇಗಾ ಎಂದು ಬೊಗಳೆ ಭಾಷಣ ಮಾಡಿ ಭ್ರಷ್ಟಾಚಾರ್‍ಮೆ ಭಾಗಿದಾರ್ ಹೋಗ ಎಂದು ವ್ಯಂಗ್ಯವಾಡಿದರು.

ಉದ್ದಿಮೆದಾರರು, ಕಾರ್ಪೊರೇಟರ್‍ಗಳ ಜೊತೆಗಿರುವ ನರೇಂದ್ರಮೋದಿ ಆಫ್‍ಸೆಟ್ ನಿರ್ವಹಣೆಯನ್ನು ಮುಖೇಶ್ ಅಂಭಾನಿ ಕಂಪನಿಗೆ ನೀಡಿ ಸ್ಥಳೀಯರಿಗೆ ವಂಚನೆ ಮಾಡಿದ್ದಾರೆ. ರೆಫೆಲ್ ಯುದ್ದ ವಿಮಾನ ಖರೀಧಿ ಹಾಗೂ ಆಫ್‍ಸೆಟ್ ನಿರ್ವಹಣೆಯಲ್ಲಿ ಏನು ಗೌಪ್ಯತೆ ಇದೆ ಎಂಬುದನ್ನು ಮೊದಲು ದೇಶದ ಜನರಿಗೆ ತಿಳಿಸಬೇಕು ಎಂದರು.
ಯುದ್ದ ವಿಮಾನ ಖರೀಧಿಯಲ್ಲಿ ಯಾವುದೇ ಟೆಂಡರ್ ಕರೆದಿಲ್ಲ. ಪಾರ್ಲಿಮೆಂಟ್ ಸಮಿತಿ ಎದುರು ಚರ್ಚಿಸದೆ ಸಾವಿರಾರು ಕೋಟಿ ರೂ.ಗಳ ಹಗರಣವೆಸಗಿರುವ ಕೇಂದ್ರ ಬಿಜೆಪಿ ಸರ್ಕಾರದ ಭ್ರಷ್ಟತನವನ್ನು ಪ್ರತಿ ಮನೆ ಮನೆಗೆ ತಿಳಿಸಲು ಎ.ಐ.ಸಿ.ಸಿ.ಅಧ್ಯಕ್ಷ ರಾಹುಲ್‍ಗಾಂಧಿ ಪಾರ್ಲಿಮೆಂಟ್‍ನಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿಯಿಂದ ಉತ್ತರ ನೀಡಲು ಏಕೆ ಆಗಿಲ್ಲ ಎಂದರು.

ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಶಾಸಕರುಗಳಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಮಾಜಿ ಸಚಿವ ಕೆ.ಶಿವಮೂರ್ತಿ ಸೇರಿದಂತೆ ನಾಯಕರುಗಳು ಭಾಗವಹಿಸಿದ್ದರು.