ಚಿತ್ರದುರ್ಗ: ರೈತರ ಸಂಪೂರ್ಣ ಸಾಲ ಮನ್ನ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಹದಿನೈದು ವರ್ಷಗಳಿಂದಲೂ ನಿರಂತರ ಬರಗಾಲವಿರುವುದರಿಂದ ಅಂರ್ತಜಲ ಬತ್ತಿ ಹೋಗಿದ್ದು, ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲಾ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ತುರ್ತಾಗಿ ಸಾಲ ಮನ್ನ ಮಾಡಬೇಕೆಂದು ಮೈತ್ರಿ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ೨೪ ಗಂಟೆಯೊಳಗೆ ರೈತರ ಸಾಲ ಮನ್ನ ಮಾಡುವುದಾಗಿ ಭರವಸೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆದರೂ ಇನ್ನು ರೈತರ ಸಾಲ ಮನ್ನ ಆಗಿಲ್ಲ. ಸಾಲ ಮನ್ನ ಮಾಡಲು ಹದಿನೈದು ದಿನಗಳ ಗಡುವು ಕೇಳಿದ್ದರೂ ಅದು ಮೀರಿದೆ. ರಾಜ್ಯದ ರೈತರ ಹಿತದೃಷ್ಠಿಯಿಂದ ಕೂಡಲೆ ಸಾಲ ಮನ್ನ ಮಾಡಿ ಅನ್ನದಾತ ರೈತ ಆತ್ಮಹತ್ಯೆ ಮಾಡಿಕೊಳ್ಳದಂತೆ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ ಕೆ.ಪಿ.ಭೂತಯ್ಯ ೨೦೧೭-೧೮ ನೇ ಸಾಲಿನ ಬೆಳೆ ವಿಮೆ ಪಾವತಿಸಿರುವ ರೈತರಿಗೆ ವಿಮೆ ಕಂಪನಿಗಳು ಇನ್ನು ವಿಮೆ ಹಣ ನೀಡಿಲ್ಲ. ರೈತರನ್ನು ಸುಲಿಗೆ ಮಾಡುತ್ತಿವೆ. ಸರ್ಕಾರಕ್ಕಿಂತ ಬೆಳೆವಿಮೆ ಕಂಪನಿಗಳು ಅತ್ಯಂತ ಅಪಾಯಕಾರಿಯಾಗಿವೆ. ತಡ ಮಾಡದೆ ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮ ಮಾಡಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ನುಲೇನೂರು ಶಂಕ್ರಪ್ಪ,
ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಬಿ.ಟಿ.ಹನುಮಂತಪ್ಪ, ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಆರ್.ಎ.ದಯಾನಂದಮೂರ್ತಿ, ಸಿ.ಆರ್.ತಿಮ್ಮಣ್ಣ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.