ಚಿತ್ರದುರ್ಗ : ನೈಸರ್ಗಿಕ ಸಂಪನ್ಮೂಲಗಳನ್ನು ಅದರಲ್ಲು ಜಲಸಂಪನ್ಮೂಲಗಳನ್ನು ಯಥಾತ್ತಾಗಿ ಉಳಿಸಿಕೊಂಡಲ್ಲಿ ರೈತರೇ ಸರ್ಕಾರಕ್ಕೆ ಕೊಡುವಂತಾಗುತ್ತಾರೆ. ಆದರೆ ಅಲ್ಲಿವರೆಗೂ ಸರ್ಕಾರವನ್ನು ಅವಲಂಬಿಸಬೇಕಾದ ಸದ್ಯ ಪರಿಸ್ಥಿತಿಯಿದೆ. ಇದು ಅಪಹಾಸ್ಯವೂ ಹೌದು ವಿಪರ್ಯಾಸವೂ ಹೌದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ವೇದಾವತಿ ನದಿ ಪಾತ್ರದ ಅಭಿವೃದ್ಧಿ ಕುರಿತು ರೂಪುರೇಷೆ ರೂಪಿಸಲು ಶ್ರೀಮುರುಘಾಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಕೃಷಿ ಸಮುದಾಯದಲ್ಲಿ ಇಂದು ಸ್ವಾಭಿಮಾನದ ಬದುಕು ಅತ್ಯಂತ ಕಷ್ಟಕರವಾಗಿದೆ. ಕಾರಣ ಕೆರೆಗಳು ಮಾಯವಾಗುತ್ತಿವೆ. ನದಿಗಳು ನಾಪತ್ತೆಯಾಗುತ್ತಿವೆ. ಮಳೆ ಮುಗಿಲು ಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದುವರೆದು, ನಿಸರ್ಗ ಇದ್ದರೆ ಮಾತ್ರ ಮಾನವ. ಆದರೆ ಮಾನವ ತನ್ನಿಂದಾಗಿಯೇ ನಿಸರ್ಗವಿದೆ ಎಂದು ತಪ್ಪು ಭಾವಿಸಿದ್ದಾನೆ. ತನ್ನ ಸ್ವಂತ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ, ನಿಸರ್ಗವನ್ನು ದುರ್ಬಳಕೆ ಮಾಡುತ್ತಿದ್ದಾನೆ. ಹೆಚ್ಚುತ್ತಿರುವ ಇಂದಿನ ಜಲ ಅಭಾವದ ದಿನಗಳಲ್ಲಿ ನೀರಿನ ಮೂಲಗಳ ಬಳಸುವ ಅನಿವಾರ್ಯತೆ ಅವಶ್ಯವಾಗಿದೆ.

ವೇದಾವತಿ ನದಿಯನ್ನು ಇಂದು ಸಂರಕ್ಷಿಸಬೇಕಾಗಿದೆ. ಯಥಾವತ್ತಾಗಿ ಹರಿಯುವಂತೆ ಮಾಡಬೇಕಾಗಿದೆ. ವಿ.ವಿ.ಸಾಗರದವರೆಗೂ ತುಂಬಿ ಹರಿಯುವಂತೆ ಮಾಡಬೇಕಾದ ಸವಾಲಿದೆ. ಈ ವೇದಾವತಿ ನದಿ ಪಾತ್ರದ ಸಂರಕ್ಷಣೆಗಾಗಿ ಬೇಕಾದ ಕ್ರಮಗಳ ಜಾರಿಗಾಗಿ ಪರಿಸರವಾದಿಗಳು ಮತ್ತು ರೈತರೊಂದಿಗೂ ಶ್ರೀಮಠವು ಸದಾ ಸಿದ್ಧವಾಗಿದೆ. ಆ ನದಿ ಹರಿಯುವಿಕೆಯನ್ನು ಸಮೃದ್ಧಿಗೊಳಿಸಬೇಕಾಗಿದೆ. ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನ ಸಾವಿರಾರು ರೈತರ ಬದುಕಿಗೆ, ಕುಡಿಯುವ ನೀರಿಗೆ ಅದು ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರಿನ ಪರಿಸರವಾದಿ ಗಿರೀಶ್ ಮಾತನಾಡಿ, ಕಾನೂನಿನ ಕಣ್ತಪ್ಪಿಸಿ ಇಂದು ಕಾಡು ಕಡಿದು ವೇದಾವತಿ ನದಿ ಮೂಲಗಳನ್ನು ಕೆಲವರು ತಮ್ಮ ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೊರರಾಜ್ಯದಿಂದಲೂ ಬರುವ ಉದ್ಯಮಿಗಳು ಈ ವೇದಾವತಿ ನದಿ ನಶಿಸಿಹೋಗಲು ತುಂಬ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಗಟ್ಟದ ಸಿದ್ಧವೀರಪ್ಪ ಮಾತನಾಡಿ, ಮರಳಿಗಾಗಿ, ಮತ್ತಿತರ ಕಾರಣಗಳಿಗಾಗಿ ವೇದಾವತಿ ನದಿ ಇಂದು ಬಲಿಯಾಗಿದೆ. ಆ ನದಿ ಪಾತ್ರದ ಜನರೆಲ್ಲರಲ್ಲಿಯೂ ಜಾಗೃತಿ ಮೂಡಿಸಿ ವೇದಾವತಿ ನದಿ ಜೀವಂತವಾಗಿಡಲು ನಾವು ರೈತರೆಲ್ಲರು ಸದಾ ಸಿದ್ಧರಾಗಿz್ದÉೀವೆ ಎಂದರು.

ಚಿಕ್ಕಮಗಳೂರಿನ ಭರತ್ ಮಣ್‍ಮಯಿ, ಆಕಾಶವಾಣಿಯ ಮಧುಸೂದನ್, ರೈತಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯಾಧ್ಯಕ್ಷ ಜಯಪ್ಪ, ತಾಲ್ಲೂಕು ಅಧ್ಯಕ್ಷ ರಾಜಶೇಖರಪ್ಪ, ಹೊಸದುರ್ಗ ತಾ| ಅಧ್ಯಕ್ಷ ಕೊರಟಗೆರೆ ರಮೇಶ್, ಹೊಳಲ್ಕೆರೆ ತಾ| ಅಧ್ಯಕ್ಷ ಬಸವರಾಜಪ್ಪ, ಹಿರಿಯೂರು ತಾ| ಕಾರ್ಯದರ್ಶಿ ರಮೇಶ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹಲವು ರೈತರು ಸಭೆಯಲ್ಲಿ ಭಾಗವಹಿಸಿದ್ದರು.