ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು, ಇಂದು ಬೆಳಿಗ್ಗೆ ಮಂಡ್ಯದ ಸಚಿವ ಸಿ.ಎಸ್.ಪುಟ್ಟರಾಜು ಅವರ ಮನೆ ಮೇಲೆ ದಾಳಿ ನಡೆಸಿದ್ದರು.

ಸಚಿವ ರೇವಣ್ಣ ಅವರ ಆಪ್ತರಾದ ನಾರಾಯಣ್ ರೆಡ್ಡಿ, ಅಶ್ವತ್ಥ್ ಹಾಗೂ ರಾಯಗೌಡ ಅವರ ಹಾಸನದಲ್ಲಿರುವ ಮನೆ ಮೇಲೆ ಹಾಗೂ ಜಿಲ್ಲೆಯ ಪಿ.ಡಬ್ಲ್ಯೂ.ಡಿ ಕಚೇರಿ ಮೇಲೆ ದಾಳಿ ನಡೆದಿದೆ.

 

ಇದರೊಂದಿಗೆ ಸಿಎಂ ಕುಮಾರಸ್ವಾಮಿ ಆಪ್ತ ಬಿ.ಎಂ.ಫಾರೂಕ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ.

ಸಿಎಂ ಕುಮಾರಸ್ವಾಮಿ ಆಪ್ತ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಮತ್ತು ಅವರ ಸಂಬಂಧಿಕರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿವರ ಸ್ವಗ್ರಾಮ ಚಿನಕುರುಳಿಯಲ್ಲಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆ ದಾಳಿ ಮಾಡಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಸಚಿವರ ಅಣ್ಣನ ಮಗ ಅಶೋಕ್ ಮನೆಯ ಮೇಲೆಯೂ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಅಲ್ಲದೇ ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೇಲೆ ದಾಳಿ ನಡೆದಿದೆ.