ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ತರಲು ಅಗತ್ಯ ಕ್ರಮಕೈಗೊಂಡಿದ್ದು, ಈಗ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಲಿದೆ ಎಂದು  ಜಲಸಂಪನ್ಮೂಲ ಸಚಿವರಾದ ರಮೇಶ್ ಲ ಜಾರಕಿಹೊಳಿ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಟನಲ್ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಗೂಳಿಹೊಸಹಳ್ಳಿಯಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ ವಿಭಾಗ ನಂ 7ರ ಪ್ಯಾಕೇಜ್-8 ಮತ್ತು ಪ್ಯಾಕೇಜ್-9ರ ಕಾಮಗಾರಿ ಪ್ರಗತಿಯ ಸ್ಥಳ ಪರಿವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದರೆ ಕೇಂದ್ರದಿಂದ ಅನುದಾನ ಬರಲಿದ್ದು ಕಾಮಗಾರಿಯ ವೆಗ ಇನ್ನಷ್ಟು ಹೆಚ್ಚಲಿದೆ. ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳ್ಳಲು ಸಹಕಾರಿಯಾಗಲಿದ್ದು, ಜೊತೆಗೆ ಅಗತ್ಯ ಹಣಕಾಸಿನ ವ್ಯವಸ್ಥೆಯು ಆಗಲಿದೆ ಎಂದು ಹೇಳಿದರು.

2008 ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದರು. ಮೊದಲು ಇದು 06 ಸಾವಿರ ಕೋಟಿ ಯೋಜನೆ ಇದಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಪ್ರದೇಶದ ಅಡೆಚಣೆಯಿಂದಾಗಿ ಕಾಮಗಾರಿ ವೇಗಕ್ಕೆ ತೊಂದರೆಯಾಗಿದೆ. ಇದು 2016 ರಲ್ಲಿ ಈ ಯೋಜನೆಯು ಮುಕ್ತಾಯವಾಗಬೇಕಿತ್ತು. ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿದೆ. ಇರುವ ಎಲ್ಲಾ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ವೇಗ ಹೆಚ್ಚಿಸಲಾಗಿದೆ. ಪ್ಯಾಕೇಜ್ 8, 9 ರಲ್ಲಿ  7.5 ಕಿ.ಮೀ ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಮೂರು ಕಡೆಇದ್ದ್ದು, ಮುಕ್ತಾಯದ ಹಂತದಲ್ಲಿದೆ. ಇನ್ನೂ 300 ಮೀಟರ್ ಮಾತ್ರ ಬಾಕಿ ಉಳಿದಿದೆ. ಅದನ್ನೂ ಜುಲೈ 15ರೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಗಡವು ನೀಡಲಾಗಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಮುಂದಿನ ಜೂನ್ ಒಳಗೆ 48 ಕೆರೆಗಳಿಗೆ ನೀರು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು ಎಲ್ಲಾ ರೈತರಿಗೂ ನೀರಾವರಿ ಸಿಗಬೇಕೆನ್ನುವುದು ನಮ್ಮ ಗುರಿಯಾಗಿದೆ ಎಂದರು.