ಚಿತ್ರದುರ್ಗ: ರಾಜ್ಯ ವಿದಾನಸಭಾ ಸಾರ್ವತ್ರಿಕ ನಡೆಯುತ್ತಿದ್ದು ಏಪ್ರಿಲ್ 17 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ನಾಮಪತ್ರವನ್ನು ಏಪ್ರಿಲ್ 24 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆಯಾ ತಾಲ್ಲೂಕುಗಳನ್ನು ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕೆಲಸದ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬೇಕು. ಏಪ್ರಿಲ್ 25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 27 ನಾಮಪತ್ರವನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 12 ರಂದು ಶನಿವಾರ ಮತದಾನ ನಡೆಯಲಿದೆ. ಮೇ 15 ರಂದು ಜಿಲ್ಲಾ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ನೀತಿ ಸಂಹಿತೆಯು ಮೇ 18 ರವರೆಗೆ ಜಾರಿಯಲ್ಲಿರುತ್ತದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು ಮೊಳಕಾಲ್ಮೂರು(97) ಪ.ಪಂಗಡ, ಚಳ್ಳಕೆರೆ(98), ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ. ಚಿತ್ರದುರ್ಗ(99), ಹಿರಿಯೂರು (100), ಹೊಸದುರ್ಗ (101) ಸಾಮಾನ್ಯ ಕ್ಷೇತ್ರಗಳಾಗಿದ್ದು ಹೊಳಲ್ಕೆರೆ (102) ಪರಿಶಿಷ್ಟ ಜಾತಿಗೆ ಮೀಸಲಿದೆ. ಸಾಮಾನ್ಯ ಅಭ್ಯರ್ಥಿಗಳು ರೂ.10 ಸಾವಿರ ಹಾಗೂ ಮೀಸಲಾತಿ ಇರುವ ಅಭ್ಯರ್ಥಿಗಳು 5 ಸಾವಿರ ಠೇವಣಿಯನ್ನು ನಗದಾಗಿ ಅಥವಾ ಖಜಾನೆ ಚಲನ್, ಆರ್.ಬಿ.ಐ.ಚಲನ್‍ನಲ್ಲಿ ಪಾವತಿಸಲು ಮಾತ್ರ ಅವಕಾಶ ಇರುತ್ತದೆ.

ಆಯಾ ತಾಲ್ಲೂಕುಗಳ ತಹಶೀಲ್ದಾರರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅಭ್ಥರ್ಥಿ ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು 5 ಜನರಿಗೆ ಮಾತ್ರ ನಾಮಪತ್ರ ಸಲ್ಲಿಲು ಪ್ರವೇಶ ನೀಡಲಾಗುತ್ತದೆ. ಒಬ್ಬ ಅಭ್ಯರ್ಥಿ ಎರಡು ಕಡೆ ಸ್ಪರ್ಧಿಸಲು ಅವಕಾಶ ಇದ್ದು ಒಂದು ಕಡೆ ಗರಿಷ್ಠ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಮಾತ್ರ ಅವಕಾಶ ಇದೆ. ಅಭ್ಯರ್ಥಿಗಳಿಗೆ ವಿವಿಧ ಅನುಮತಿಗಳಿಗಾಗಿ ಸುವಿಧಾ , ಸುಗಮ್ ಏಕಗವಾಕ್ಷಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ 6 ಕ್ಷೇತ್ರಗಳಿಂದ 1604 ಮತದಾನ ಕೇಂದ್ರಗಳಿವೆ. ಮೊಳಕಾಲ್ಮೂರು 279, ಚಳ್ಳಕೆರೆ 254, ಚಿತ್ರದುರ್ಗ 280, ಹಿರಿಯೂರು 285, ಹೊಸದುರ್ಗ 236, ಹೊಳಲ್ಕೆರೆ 294 ಹಾಗೂ 24 ಹೆಚ್ಚುವರಿ ಮತದಾನ ಕೆಂದ್ರ ಸೇರಿ ಒಟ್ಟು 1628 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 13,20,657 ಮತದಾರರಿದ್ದು, ಆಪೈಕಿ 6,67,154 ಪುರುಷ ಮತದಾರರು, 6,53,420 ಮಹಿಳಾ ಮತದಾರರಿದ್ದು, 83 ಇತರೆಯವರು ಸೇರಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 2,27,102, ಚಳ್ಳಕೆರೆಯಲ್ಲಿ 2,06,471, ಚಿತ್ರದುರ್ಗದಲ್ಲಿ 2,46,310, ಹಿರಿಯೂರಿನಲ್ಲಿ 2,32,620, ಹೊಸದುರ್ಗದಲ್ಲಿ 1,85,334, ಹಾಗೂ ಹೊಳಲ್ಕೆರೆಯಲ್ಲಿ 2,22,820 ಮತದಾರರಿದ್ದಾರೆ. ಮತದಾರರ ನೋಂದಣಿ, ವರ್ಗಾವಣೆ, ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 14 ರವರೆಗೆ ಅವಕಾಶ ನೀಡಿದ್ದು ಇದರ ಸೇರ್ಪಡೆಯನ್ನು ಮಾಡಲಾಗುತ್ತದೆ, ಈ ಕೆಲಸ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ದೂರು, ಮಾಹಿತಿಗಾಗಿ ಚಿತ್ರದುರ್ಗದಲ್ಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು ಟೋಲ್‍ಫ್ರೀ 1077 ಸಂಖ್ಯೆಗೆ ದಿನದ 24 ಗಂಟೆಯು ಕರೆ ಮಾಡಬಹುದಾಗಿದೆ. ತಾಲ್ಲೂಕುಗಳಲ್ಲಿಯು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊಳಕಾಲ್ಮೂರು 08198-229009, ಚಳ್ಳಕೆರೆ 08195-250648, ಚಿತ್ರದುರ್ಗ 08194-222416, ಹಿರಿಯೂರು 08193-263226, ಹಾಗೂ ಹೊಳಲ್ಕೆರೆ 08191-275062. ಚುನಾವಣೆ ಸಂಬಂಧ ದೂರು, ಮಾಹಿತಿಗೆ ಕರೆ ಮಾಡಲು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಚುನಾವಣಾ ವೆಚ್ಚವಾಗಿ ರೂ. 28 ಲಕ್ಷ ಖರ್ಚು ಮಾಡಲು ಅವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ವೆಚ್ಚ ಮಾಡಲು ಅಭ್ಯರ್ಥಿ ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ತೆರೆದು ಇದರ ವಿವರವನ್ನು ನಾಮಪತ್ರ ಸಲ್ಲಿಕೆ ವೇಳೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಶಿ ಮಾತನಾಡಿ ಎಲ್ಲಾ ತಾಲ್ಲೂಕುಗಳ ನಾಮಪತ್ರ ಸಲ್ಲಿಸುವ ಕೇಂದ್ರಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗುವುದು. ಕಾನೂನು, ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಗಲಭೆ, ಗಲಾಟೆ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಮತದಾರರು ನಿರ್ಬಿಡೆಯಿಂದ ಮತ ಚಲಾಯಿಸಲು ಮುಂದಾಗಬೇಕೆಂದು ಅವರು ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಪಿ.ಎನ್.ರವೀಂದ್ರ ಉಪಸ್ಥಿತರಿದ್ದರು.