ಬಾಗಲಕೋಟೆ: ‘ಮುಖ್ಯಮಂತ್ರಿ ಯಡಿಯೂರಪ್ಪನವರ ಭ್ರಷ್ಟಾಚಾರ ಸಿಡಿ ಮಾತ್ರವಲ್ಲ, ನೋಡಲು ಸಾಧ್ಯವಾಗದಂತಹ ಸಿಡಿಗಳೂ ಇವೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ನನ್ನ ಬಳಿ ಬಂದಿದ್ದ ಮೂವರು ಶಾಸಕರ ಬಳಿ ಆ ಸಿಡಿಗಳಿವೆ. ಆದರೆ, ನಾನು ಅಂತಹ ಸಿಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವಂತವನಲ್ಲ. ಹಾಗೆ ಮಾಡುವವನಾಗಿದ್ದರೆ ಇಂದು ನಾನು ಉಪಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಹೇಳಿದರು.

ಕೇವಲ ಬಿಜೆಪಿ ಶಾಸಕರ ಬಳಿ ಮಾತ್ರವಲ್ಲ, ಆ ಸಿಡಿ ವಿಪಕ್ಷ ಕಾಂಗ್ರೆಸ್ ನಾಯಕರ ಬಳಿಯೂ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಕೆ.ಜೆ.ಜಾರ್ಜ್ ಅವರ ಬಳಿಯೂ ಆ ಸಿಡಿ ಇದೆ. ಸಿಡಿ ಇಟ್ಟುಕೊಂಡು ಕಾಂಗ್ರೆಸ್‌ನವರು ಮುಖ್ಯಮಂತ್ರಿಯಿ0ದ ಹೆಚ್ಚು ಅನುದಾನ ಪಡೆಯುತ್ತಿದ್ದಾರೆ. ನಾವು ಅನುದಾನ ಕೇಳಿದರೆ ವಿಷ ಕುಡಿಯಲೂ ಹಣವಿಲ್ಲ ಎನ್ನುತ್ತಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಅನುದಾನ ನೀಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಎಂಬುದಿದ್ದರೆ ಆ ಸಿಡಿಗಳನ್ನು ಬಿಡುಗಡೆ ಮಾಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಇದೇ ವೇಳೆ ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ಸವಾಲು ಹಾಕಿದ್ದಾರೆ