ಬಾಕು (ಅಝರ್‌ಬೈಜಾನ್), ನ. 10: ಅರ್ಮೇನಿಯ ಜೊತೆಗಿನ ಗಡಿಯಲ್ಲಿ ರಶ್ಯದ ಸೇನಾ ಹೆಲಿಕಾಪ್ಟರೊಂದನ್ನು ಹೊಡೆದುರುಳಿಸಿರುವುದನ್ನು ಅಝರ್‌ಬೈಜಾನ್ ಸೋಮವಾರ ಒಪ್ಪಿಕೊಂಡಿದೆ ಹಾಗೂ ಅದಕ್ಕಾಗಿ ಕ್ಷಮೆ ಯಾಚಿಸಿದೆ.

ಆರ್ಮೇನಿಯದಲ್ಲಿ ಅಝರ್‌ಬೈಜಾನ್ ಜೊತೆಗಿನ ಗಡಿಯ ಸಮೀಪ ಸೋಮವಾರ ಹೆಲಿಕಾಪ್ಟರನ್ನು ಹೊಡೆದುರುಳಿಸಿದಾಗ ಅದರಲ್ಲಿದ್ದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.

”ಈ ದುರಂತ ಘಟನೆಗೆ ಸಂಬಂಧಿಸಿ ಅಝರ್‌ಬೈಜಾನ್ ರಶ್ಯದ ಕ್ಷಮೆ ಯಾಚಿಸಿದೆ” ಎಂದು ಅಝರ್‌ಬೈಜಾನ್ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಘಟನೆಯು ಅಪಘಾತವಾಗಿದೆ ಹಾಗೂ ರಶ್ಯವನ್ನು ಗುರಿಯಾಗಿಸಿ ನಡೆಸಿದ ಕೃತ್ಯವಲ್ಲ ಎಂದು ಅದು ಹೇಳಿದೆ.

ಹೆಲಿಕಾಪ್ಟರ್ ಕತ್ತಲೆಯಲ್ಲಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ನಡುವಿನ ಗಡಿಯ ಸಮೀಪದಲ್ಲಿ ತಗ್ಗಿನಲ್ಲಿ ಹಾರುತ್ತಿತ್ತು ಎಂದು ಅಝರ್‌ಬೈಜಾನ್ ವಿದೇಶ ಸಚಿವಾಲಯ ತಿಳಿಸಿದೆ.

”ರಶ್ಯ ವಾಯು ಪಡೆಯ ಹೆಲಿಕಾಪ್ಟರ್‌ಗಳು ಈ ಹಿಂದೆ ಈ ಸ್ಥಳದಲ್ಲಿ ಕಾಣಿಸಿಕೊಂಡಿಲ್ಲ” ಎಂದು ಹೇಳಿಕೆ ತಿಳಿಸಿದೆ.

ಪ್ರಸಕ್ತ ಆರ್ಮೇನಿಯ ಪ್ರತ್ಯೇಕತಾವಾದಿಗಳೊಂದಿಗೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಹೆಲಿಕಾಪ್ಟರ್ ಮೇಲೆ ಗುಂಡು ಹಾರಿಸಲು ಅಝರ್‌ಬೈಜಾನ್ ಪಡೆಗಳು ನಿರ್ಧರಿಸಿದವು ಎಂದು ಅದು ಹೇಳಿದೆ.

ವಿವಾದಾಸ್ಪದ ಪ್ರದೇಶ ನಗೋರ್ನೊ-ಕರಬಾಖ್ ವಿಚಾರದಲ್ಲಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳು ಯುದ್ಧದಲ್ಲಿ ತೊಡಗಿವೆ.