ಬೆಂಗಳೂರು: ರಾಜ್ಯದಲ್ಲಿ ರಜನಿಕಾಂತ್ ಸಿನಿಮಾ ಕಾಲ ಚಿತ್ರಕ್ಕೆ ಯಾವುದೇ ಅಡಚಣೆ ಆಗದೆ ಸಿನಿಮಾ ಪ್ರದರ್ಶನಕ್ಕೆ  ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ  ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.

ಕಾಲ ಸಿನಿಮಾಕ್ಕೆ ನಿಷೇಧ ಹೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಯಾವ್ಯಾವ ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್ ಗಳಲ್ಲಿ ಕಾಳ ಸಿನಿಮಾ ಪ್ರದರ್ಶನಗೊಳ್ಳಲಿದೆ ಮತ್ತು ಎಷ್ಟು ಹೊತ್ತಿಗೆ ಪ್ರದರ್ಶನ ಕಾಣಲಿದೆ ಎಂಬಿತ್ಯಾದಿ ವಿವರಗಳನ್ನು ಒದಗಿಸಿದರೆ ಪ್ರದರ್ಶಕರಿಗೆ ಸಾಕಷ್ಟು ಭದ್ರತೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಜಿ ಶಿವಣ್ಣ ಹೇಳಿಕೆ ನೀಡಿದ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ರಜನಿಕಾಂತ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಚಿತ್ರ ಪ್ರದರ್ಶನಗೊಂಡರೆ ಅಹಿತಕರ ಘಟನೆ ನಡೆಯಬಹುದು ಎಂದು ಮುನ್ನೆಚ್ಚರಿಕೆಯಿಂದ ನಿರ್ಬಂಧ ವಿಧಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರದ ವಿರುದ್ಧ ನಿರ್ಮಾಣ ಸಂಸ್ಥೆ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಅಳಿಯ ಧನುಷ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಜಿ. ನರೇಂದರ್ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡ್ಡಿದ್ದಾರೆ.