ಚಿತ್ರದುರ್ಗ: ಧ್ಯಾನ ಯೋಗದಿಂದ ಮಾತ್ರ ನೆಮ್ಮದಿಯ ಜೀವನ ಕಂಡುಕೊಂಡು ಆರೋಗ್ಯವಂತನಾಗಿರಬಹುದು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಶ್ಮಿ ಅಕ್ಕನವರು ಹೇಳಿದರು.
ಭಾರತ ಸರ್ಕಾರ ನೆಹರು ಯುವ ಕೇಂದ್ರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ರಂಗಭಂಡಾರ ಕಲಾ ಸಂಘ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಪತ್ತು ಸಂಕಲ್ಪಸೇ ಸಿದ್ದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಕಲ್ಪದಿಂದ ಜಗತ್ತು ನಡೆಯುತ್ತಿದೆ. ಹಣ ಬಲ, ವಿದ್ಯ ಬಲ ಇದ್ದರೆ ಸಾಲದು. ನಮ್ಮ ಜೀವನ ನಮ್ಮ ಕೈಯಲ್ಲಿರುವುದರಿಂದ ಮತ್ತೊಬ್ಬರನ್ನು ದೂಷಿಸುವ ಬದಲು ಸಂಕಲ್ಪದ ಮೊರೆ ಹೋಗಬೇಕು ಎಂದು ತಿಳಿಸಿದರು.
ಸಂಕಲ್ಪ ಬಲಹೀನವಾದಾದ ಮನುಷ್ಯ ದುರ್ಬಲನಾಗುತ್ತಾನೆ. ಪರಿಸರ ಹಾಳಾಗಲು ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯನೇ ನೇರ ಕಾರಣ. ಎಲ್ಲವನ್ನು ನಕಾರಾತ್ಮಕ ಚಿಂತನೆಯಿಂದ ನೋಡುವ ಬದಲು ಸಕಾರಾತ್ಮಕ ಚಿಂತನೆಯಿಂದ ಸ್ವೀಕರಿಸಿದಾಗ ಮಾತ್ರ ಒತ್ತಡದಿಂದ ಪ್ರತಿಯೊಬ್ಬರು ದೂರವಿದ್ದು, ನೆಮ್ಮದಿಯ ಜೀವನ ನಡೆಸಬಹುದು. ಒತ್ತಡ, ಈರ್ಶೆ, ದ್ವೇಷ, ಅಸೂಯೆ ಬಂದಾಗ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಹಕ್ಕೆ ಚಿಕಿತ್ಸೆ ಎಷ್ಟು ಮುಖ್ಯವೋ ಅಂತರಾಳಕ್ಕೂ ಚಿಕಿತ್ಸೆ ಬೇಕಾಗಿದೆ. ವಿಜ್ಞಾನ ಕೊನೆಯಾದಾಗ ಆಧ್ಯಾತ್ಮಿಕ ಶುರುವಾಗುತ್ತದೆ. ಜೂ.೨೧ ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಆತ್ಮದ ಸಂಬಂಧವೇ ನಿಜವಾದ ಯೋಗ. ಧ್ಯಾನದಿಂದ ಮಾತ್ರ ಪ್ರಬುದ್ದ ಸಶಕ್ತನಾಗಬಹುದು ಎಂದು ಧ್ಯಾನ ಯೋಗದ ಮಹತ್ವವನ್ನು ರಶ್ಮಿ ಅಕ್ಕ ವಿವರಿಸಿದರು.
ಎಸ್.ಜೆ.ಎಂ.ಶಾಲೆ ಪ್ರಾಂಶುಪಾಲರಾದ ಪರಂಜ್ಯೋತಿ, ಯೋಗಶಿಕ್ಷಕ ರಾಮಚಂದ್ರಣ್ಣ, ಎಸ್.ಜೆ.ಎಂ.ಶಾಲೆಯ ದೈಹಿಕ ಶಿಕ್ಷಕ ಚಿನ್ನಯ್ಯ, ರಂಗಭಂಡಾರ ಕಲಾ ಸಂಘದ ಅಧ್ಯಕ್ಷೆ ಬಿ.ನಿರ್ಮಲ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಗಾಯಕ ಗಂಗಾಧರ್, ಕಲಾವಿದ ಕುಮಾರಣ್ಣ ವೇದಿಕೆಯಲ್ಲಿದ್ದರು.