ಚಿತ್ರದರ್ಗ: ಯುವಜನರು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಮೊಬೈಲ್, ಅಂತರ್ಜಾಲದಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಾರೆ. ಇದರಿಂದ ಸಾಧನೆ ಮಾಡುವ ಉತ್ಸಾಹವು ಇಲ್ಲದಂತಾಗಿದೆ ಇವರನ್ನು ಚೈತನ್ಯರನ್ನಾಗಿ ಮಾಡಲು ಸರ್ಕಾರ ಮುಂದಾಗಬೇಕಿದೆ ಎಂದು ಶಾರದಾ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಶ್ರೀ ಸ್ವಾಮಿ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತೀರ್ಣರಾದರೆ, ಕಡಿಮೆ ಅಂಕ ಬಂದರೆ ಅಥವಾ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರಂತ ಮತ್ತು ಅದು ಹೇಡಿತನ. ಪರೀಕ್ಷೆಯಲ್ಲಿ ಅನುತೀರ್ಣರಾದರೆ ಮತ್ತೆ ಪರೀಕ್ಷೆ ಕಟ್ಟಿ ಓದಿ ಉತೀರ್ಣರಾಗಬೇಕು. ಚೆನ್ನಾಗಿ ಕಾಲಕಾಲಕ್ಕೆ ಓದಿದರೆ ಅನುತೀರ್ಣರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಮಾಜಮುಖಿಯಾಗಿ ಕೆಲಸ ಮಾಡುವ ಯುವಜನರನ್ನು ಪ್ರೋತ್ಸಾಹಿಸಲು ಯುವಜನರ ಸ್ಪೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಬೇಕಾದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡಿದಂತೆ ಕಾಣುತ್ತಿದೆ. ಸರ್ಕಾರ ಜಯಂತಿ ಆಚರಿಸುವಂತೆ ಸೂಚನೆ ನೀಡಿದ ಮೇಲೆ ಅಚ್ಚುಕಟ್ಟಾಗಿ ಮಾಡಿ ಮಹಾನ್ ನಾಯಕ ವಿವೇಕಾನಂದರಿಗೆ ಗೌರವ ಸಲ್ಲಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ ಎಂದು ಸೂಚ್ಯವಾಗಿ ಹೇಳಿದರು.

ಜಿಲ್ಲಾಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ವಿಜಂiiಜೋತ್ಸ್ನ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಧಾಕರ್, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರೊ.ಸಣ್ಣಮ್ಮ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.