ಚಿತ್ರದುರ್ಗ: ಯುವಕರು ಹಾಗೂ ಗ್ರಾಮೀಣರು ರಾಜಕೀಯ ಅಮಲನ್ನು ಏರಿಸಿಕೊಂಡು ಬದುಕನ್ನು ಕಳೆದುಕೊಳ್ಳಬೇಡಿ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮೀಜಿ ಕರೆ ನೀಡಿದರು.

ಶಿರಾ ತಾಲೂಕು ಮಾದೇನಹಳ್ಳಿಯ ಶ್ರೀಮುದ್ದುವೀರಸ್ವಾಮಿ ಗದ್ದುಗೆ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಹಾಗೂ ಹುಣ್ಣಿಮೆ ಸತ್ಸಂಗದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಿಂದಿನ ಚುನಾವಣೆ ಸೇವಾ ಮನೋಭಾವದಿಂದ ಕೂಡಿರುತ್ತಿತ್ತು. ಇಂದಿನ ದಿನಮಾನಗಳಲ್ಲಿ ಚುನಾವಣೆ ಎನ್ನುವುದು ವ್ಯವಹಾರಿಕ ಕೇಂದ್ರಗಳಾಗಿವೆ. ಒಬ್ಬ ಅಭ್ಯರ್ಥಿ ೧೦ ರಿಂದ ೧೫ ಕೋಟಿ ರೂ.ಗಳನ್ನು ಖರ್ಚು ಮಾಡಿ ಚುನಾವಣೆಯಲ್ಲಿ ಗೆಲ್ಲುವುದಾದರೆ ಕಷ್ಠಪಟ್ಟು ಶ್ರಮ ವಹಿಸಿ ದುಡ್ಡು ತಂದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಆಗುವುದಿಲ್ಲ. ಬೀಜವನ್ನು ಬಿತ್ತಿ ರಾಶಿಯನ್ನು ತುಂಬಿಕೊಳ್ಳುವ ರೀತಿಯಲ್ಲಿ ಚುನಾವಣೆಯಲ್ಲಿ ನೂರಾರು ಕೋಟಿ ರೂ.ಗಳಿಸಲು ಹೊರಟಿರುವುದು ಖೇದಕರ ಎಂದು ವಿಷಾಧಿಸಿದರು.

ಹಣದ ದಾಹಕ್ಕೆ ಬಲಿಯಾಗಿ ಯುವಕರು ರಾಜಕೀಯ ಗುಂಗಿನಲ್ಲಿ ಮುಳುಗಿರುವುದರಿಂದ ಹಳ್ಳಿಗಾಡಿನಲ್ಲಿ ವಾತಾವರಣವೇ ಕಲುಷಿತಗೊಂಡಿದೆ. ಪ್ರಜ್ಞಾವಂತ ಮತದಾರರು ಪ್ರಜ್ಞಾವಂತರನ್ನು ಆರಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಸುಲಲಿತ, ಸರಳವಾಗಿ ಚುನಾವಣೆ ನಡೆಯಲು ಚುನಾವಣಾ ನೀತಿ ಸಂಹಿತೆ ಜಾರಿಯಾದಾಗ ಮಾತ್ರ ಸುಸ್ಥಿರ ಸಮಾಜ ನೋಡಲು ಸಾಧ್ಯ. ಜೊತೆಗೆ ಪ್ರತಿಯೊಬ್ಬರು ಕಾಯಕ ಮಾಡಿ ಬದುಕನ್ನು ಕಟ್ಟಿಕೊಳ್ಳಬೇಕೆ ವಿನಃ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಆಸೆ ಆಮಿಷಗಳಿಗೆ ಬಲಿಯಾಗಿ ಇಡೀ ಬದುಕನ್ನೇ ನಾಶಪಡಿಸಿಕೊಳ್ಳಬಾರದು ಎಂದು ತಿಳಿಸಿದರು.

ಹಿಂದೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹುಡುಕಿ ಬಲವಂತವಾಗಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಕ್ಷೇತ್ರಗಳನ್ನು ಅಭಿವೃದ್ದಿಪಡಿಸಿಕೊಳ್ಳುವಂತ ವಾತಾವರಣವಿತ್ತು. ಈಗ ಒಂದೊಂದು ಮನೆಯಲ್ಲಿ ಇಬ್ಬಿಬ್ಬರು ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಟಿಕೇಟ್ ಸಿಗದಿದ್ದರೆ ದುಃಖಿಸುವುದು, ದೊಂಬಿ, ಗಲಾಟೆ ಮಾಡಿಸುವುದನ್ನು ನೋಡಿದರೆ ಹಣ ಅಧಿಕಾರದ ಆಸೆ ಇಟ್ಟುಕೊಂಡು ಜನಸೇವೆಯ ಮುಖವಾಡ ಹೊತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯಾಧೀಶರಾದ ನಂದೀಶ್, ಮಠದ ವ್ಯವಸ್ಥಾಪಕ ರಂಗಪ್ಪ, ರಮೇಶ್‌ಗುಟ್ಟೆ, ಗಿರೀಶ್, ಕಿಶೋರ್ ವೇದಿಕೆಯಲ್ಲಿದ್ದರು.