ಬೆಂಗಳೂರು: ಯುಗಾದಿ ಹಬ್ಬದಿಂದಲೇ ಹೊಸ ವರ್ಷ ಆರಂಭ.  ಪ್ರತಿವರ್ಷವೂ ಆರಂಭವಾದ ಚಂದ್ರಮಾನ ಅಮಾವಸ್ಯೆಯ ಮರುದಿನದಂದು ಬರುವ ಯುಗಾದಿಯನ್ನು ಹಿಂದೂಗಳು ಹೊಸವರ್ಷ ಎಂದು ಕರೆಯುವರು.

ಈ ಹಬ್ಬ ಸುಖ-ದುಃಖ, ಸಿಹಿ-ಕಹಿ, ನೋವು-ನಲಿವುಗಳ ಸಮನಾಗಿ ಕಾಣಬೇಕೆನ್ನುವ ದಿವ್ಯ ಸಂದೇಶವನ್ನು ಸಾರುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಮಕ್ಕಳಿಂದ ಮುದುಕರು ಸೇರಿ ಬೇವಿನ ಸೊಪ್ಪನ್ನು ನೀರಿಗೆ ಬೆರಸಿ ತಲೆಗೆ ಎಣ್ಣೆಯ ಮಜ್ಜನವನ್ನು ಮುಂಜಾವಿನಲ್ಲಿ ಮಾಡಿ ಹೊಸ ಬಟ್ಟೆಯನ್ನು ಧರಿಸುತ್ತಾರೆ.

ರೈತರು ಭೂಮಿಯನ್ನು ಉಳುಮೆ ಮಾಡಿ ಹಣ್ಣು, ಕಾಯಿ ದೂಪದೀಪದಿಂದ ಭೂ ತಾಯಿಯನ್ನು ಆರಾಧಿಸುತ್ತಾರೆ. ಅಲ್ಲದೇ ಶಾವಿಗೆ ಬೆಲ್ಲದ ನೈವೇದ್ಯ ಮಾಡುವುದರಿಂದ ಒಳ್ಳೆಯ ಫಲ ನೀಡುತ್ತಾಳೆ ಎಂಬ ನಂಬಿಕೆ ಇದೆ. ಈ ಹಬ್ಬದ ವಿಶೇಷವೂ ಕೂಡ. ಈ ದಿನದಂದು ಕುರುಬರಿಂದ ಪೂಜೆ ಮಾಡಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಉತ್ತರ ಕರ್ನಾಟಕದಲ್ಲಿದೆ.

ಪ್ರತಿಯೊಬ್ಬರೂ ತಮ್ಮ ಹೊಸ ಕಾರ್ಯಗಳಿಗೆ ಈ ದಿನದಂದು ಚಾಲನೆ ನೀಡುವುದರಿಂದ ಒಳಿತಾಗುವುದು. ಅಂಗಡಿ ಇಡುವುದು, ಹೊಲ ಹಿಡಿಯುವುದು, ಮನೆ ಕಟ್ಟುವುದು, ಭೂಮಿ ಪೂಜೆ, ವ್ಯಾಪಾರ ಮತ್ತೀನಿತರ ಕಾರ್ಯಗಳಿಗೆ ಈ ಹಬ್ಬ ಪ್ರಾರಂಭದ ದಿನವಾಗಿರುತ್ತದೆ. ಅಲ್ಲದೇ ಮನೆ ಮುಂದೆ ಮಾವೀನ ತೋರಣ, ರಂಗೋಲಿಯಿಂದ ಮನೆಯನ್ನು ಶೃಂಗರಿಸಿ ಮನೆಯ ಹಿರಿಯರಿಗೆ ಸಿಹಿ ಊಟದ ಜೊತೆ ನೈವೇದ್ಯವನ್ನು ಮಾಡುತ್ತಾರೆ.

ನೆರೆಹೊರೆಯವರೊಂದಿಗೆ ಬೇವು-ಬೆಲ್ಲದ ವಿನಯಮ ಮಾಡುತ್ತಾರೆ. ಇದರಿಂದ ಜೀವನದ ಕಷ್ಟಗಳನ್ನು, ದ್ವೇಷವನ್ನು ಮರೆತು ಪ್ರೀತಿ, ಸ್ನೇಹ ಸುಖದ ಬೆಲ್ಲವನ್ನು ಸವಿಯುವ ಈ ಹಬ್ಬ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗಾಗಿ ಈ ಹಬ್ಬ ಬಹಳ ಮಹತ್ವವಾದದ್ದು