ಚಿತ್ರದುರ್ಗ: ಕೋಮುವಾದಿ ಪಕ್ಷದ ಬಿ.ಎಸ್.ಯಡಿಯೂರಪ್ಪನವರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್‌ರವರು ಮಾತನಾಡಿ ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಬಿಡಬಾರದೆಂಬ ದುರುದ್ದೇಶದಿಂದ ತರಾತುರಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಬಿಜೆಪಿ.ಯವರಿಂದ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್‌ಷಾರವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಡಬಾರದೆಂಬ ಕುತಂತ್ರವೇ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕಾರಣ. ರಾಜ್ಯದಲ್ಲಿ ಕೋಮುವಾದಿಗಳು ಆಡಳಿತ ನಡೆಸಲು ಬಿಡುವುದಿಲ್ಲ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಆರ್.ಶೇಷಣ್ಣಕುಮಾರ್, ಟಿ.ಶಫೀವುಲ್ಲಾ, ಚಾಂದ್‌ಪೀರ್, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್‌ಆಲಿ, ಸೈಯದ್ ಸೈಫುಲ್ಲಾ, ಯೂತ್ ಕಾಂಗ್ರೆಸ್‌ನ ಮಹಮದ್ ಆಜಾಂ, ನ್ಯಾಯವಾದಿ ರವಿ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.