ಧಾರವಾಡ: ರಾಜ್ಯದಲ್ಲಿರುವ ಕೆಲ ಮುಸ್ಲಿಂ ಸಂಘಟನೆಗಳ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಹಿಂತೆಗಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ತುಷ್ಟೀಕರಣದ ಪರಾಕಾಷ್ಟೆಯನ್ನು ಮುಟ್ಟಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ಸರ್ಕಾರಿ ಪ್ರೇರಿತ ದೌರ್ಜನ್ಯ ನಡೆಯುತ್ತಲೇ ಇದೆ. ರಾಜ್ಯ ಸರ್ಕಾರ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತದೆ, ಮತ್ತು ಕೆಲ ವಿಚಾರವಾದಿಗಳು ಅಸಹಿಷ್ಣುತೆ ವಿಚಾರ ಬಂದಾಗ ಯಾವ ರೀತಿ ತಮ್ಮ ಮೆಡಲ್ ಗಳನ್ನು ವಾಪಸ್ ನೀಡಿದರೋ ಅವರಿಗೆ ನಾನು ಕೇಳುತ್ತೇನೆ ಪರೇಶ ಮೇಸ್ತಾ ಒಬ್ಬ ಹಿಂದುಳಿದವನು ಹೌದೋ ಅಲ್ಲವೋ? ಎಂದರು.

ರಾಜ್ಯದಲ್ಲಿ 17 ಜನ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಅದರಲ್ಲಿ 12 ರಿಂದ 13 ಜನ ಹಿಂದುಳಿದವರೇ ಇದ್ದಾರೆ. ಈ ಹತ್ಯೆಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಆ ಮೂಲಕ ಅವರು ಔರಂಗಜೇಬನ ಕುಲದಲ್ಲಿ ಹುಟ್ಟಿದವರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.

ಶಿರಸಿ, ಹೊನ್ನಾವರದಲ್ಲಿ ಯಾವ ಗಲಾಟೆಯೂ ನಡೆದಿಲ್ಲ. ಅದೊಂದು ರಾಜಕೀಯ ಮೆರವಣಿಗೆ ಆಗಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂಥ ಜವಾಬ್ದಾರಿಯುತ ಶಾಸಕರು ಆ ಮೆರವಣಿಗೆಯನ್ನು ಲೀಡ್ ಮಾಡುತ್ತಿದ್ದರು. ಮೆರವಣಿಗೆಯಲ್ಲಿ ಸಣ್ಣ ತಳ್ಳಾಟ, ನೂಕಾಟ ನಡೆದಿದೆ. ಅಷ್ಟಕ್ಕೇ ಕಾರ್ಯಕರ್ತರ ಮೊಬೈಲ್ ಗಳನ್ನು ಕಸಿದು, ಬೈಕ್ ಕೀ ಗಳನ್ನು ಕಸಿದುಕೊಂಡು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳನ್ನೂ ಕರೆದುಕೊಂಡು ಹೋಗಿ ಅವರನ್ನು ಹೊಡೆದಿದ್ದಾರೆ. ಅದೂ ಅಲ್ಲದೇ ಅಮಾಯಕರ ಮೇಲೆ 307 ಪ್ರಕರಣವನ್ನು ದಾಖಲಿಸಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಯಾರೇ ಧ್ವನಿ ಎತ್ತಿದರೂ ಅವರನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡಿದ ಒಬ್ಬ ಮೌಲ್ವಿಯ ಮೇಲೆ ಸಾಮಾನ್ಯ ಕೇಸ್ ನ್ನು ಹಾಕಿ ಒಂದೇ ದಿನದಲ್ಲಿ ಅವರನ್ನು ಬಿಡಲಾಗುತ್ತದೆ. ಅದೇ ಶಿರಸಿಯಲ್ಲಿ ನಡೆದ ಸಣ್ಣ ತಳ್ಳಾಟದಲ್ಲಿ ಅಮಾಯಕ ಯುವಕರನ್ನು ಕರೆತಂದು ಅವರ ಮೇಲೆ 307 ಪ್ರಕರಣವನ್ನು ದಾಖಲಿಸಲಾಗುತ್ತದೆ. ಸರ್ಕಾರ ರಾಜ್ಯದಲ್ಲಿ ಇಂಥ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರೇಶ ಮೇಸ್ತಾ ಅವರ ಹತ್ಯೆ ಐಸಿಸ್ ಮಾದರಿಯಲ್ಲಿ ನಡೆದಿದೆ. ಇದನ್ನು ಇಸ್ಲಾಮಿಕ್ ಫಂಡಾಮೆಂಟಲಿಸ್ಟ್ ಗಳೇ ಮಾಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೂಡಲೇ ಈ ಹತ್ಯೆ ಪ್ರಕರಣವನ್ನು ಎನ್ಐಎ ದಿಂದ ತನಿಖೆ ನಡೆಸಬೇಕು ಮತ್ತು ಗೃಹಮಂತ್ರಿಗಳ ಸಲಹೆಗಾರರನ್ನು ಕೂಡಲೇ ಆ ಸ್ಥಾನದಿಂದ ಕಿತ್ತೊಗೆಯಬೇಕು ಎಂದರು.

ನಿಂಬಾಳಕರ ಒಬ್ಬ ಖಾಕಿ ತೊಟ್ಟಿರುವ ಕಾಂಗ್ರೆಸ್ ಕಾರ್ಯಕರ್ತ. ಬಿಜೆಪಿ ವಿರೋಧಿ ಹೇಳಿಕೆಗಳನ್ನು ಅವರು ಕೊಡುತ್ತಾರೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂಬುದನ್ನು ನಿಂಬಾಳಕರ ಮರೆಯಬಾರದು ಎಂದ ಜೋಶಿ, ಕೂಡಲೇ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಲಾಗಿರುವ 307 ಪ್ರಕರಣವನ್ನು ಹಿಂಪಡೆಯಬೇಕು ಎಂದರು.