ಚಿತ್ರದುರ್ಗ : ನಗರದ ಶ್ರೀ ಮುರುಘಾಮಠದಿಂದ ಪ್ರತಿವರ್ಷ ಕೊಡಮಾಡುತ್ತಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು 2018ನೇ ಸಾಲಿಗೆ ನಮ್ಮ ನಾಡಿನ ಬಹುಮುಖ ಪ್ರತಿಭೆಯ ಹಿರಿಯ ಸಾಹಿತಿ; ನಾಡು-ನುಡಿ ಅಭಿವೃದ್ಧಿಯ ಹೆಸರಾಂತ ಹೋರಾಟಗಾರ; ದಲಿತ-ಬಂಡಾಯ ಧ್ವನಿತ ಪ್ರಗತಿಪರ ಚಿಂತಕ; ಪತ್ರಿಕಾ ಸಂಪಾದಕ; ಮೌಢ್ಯ, ಪುರೋಹಿತ್ಯ ಮತ್ತು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧದ ನಿರಂತರ ಪ್ರತಿಭಟನೆಗಳ ಹರಿಕಾರ; ಸಾಂಸ್ಕøತಿಕ ಸಂಘಟನೆಗಳ ನೇತಾರ ಡಾ|| ಚಂದ್ರಶೇಖರ ಪಾಟೀಲ ಇವರಿಗೆ ನೀಡಲಾಗಿದೆ.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಈ ಕುರಿತು ವಿವರ ನೀಡುತ್ತ, ದಿನಾಂಕ 7-5-2019ರಂದು ಬೆಳಗ್ಗೆ 11ಗಂಟೆಗೆ ಚಿತ್ರದುರ್ಗ ಶ್ರೀಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ನಡೆಯುವ ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಹಾಗು ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮ.ನಿ.ಜ. ಮಾತೆ ಗಂಗಾದೇವಿ, ಪೀಠಾಧ್ಯಕ್ಷರು, ಬಸವಧರ್ಮ ಪೀಠ, ಕೂಡಲಸಂಗಮ ಇವರು ದಿವ್ಯಸಾನ್ನಿಧ್ಯ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಗೌರವಾನ್ವಿತರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ರಾಜವಂಶಸ್ಥರು, ಮೈಸೂರು ಇವರು ಭಾಗವಹಿಸುವರು. ಬೆಂಗಳೂರು ಐ.ಪಿ.ಸಿ. ಚರ್ಚ್‍ನ ಮಾಜಿ ಅಧ್ಯಕ್ಷರಾದ ರೆವರೆಂಡ್ ಟಿ.ಡಿ. ಥಾಮಸ್, ಮತ್ತು ಎಸ್.ಎಸ್.ಎಫ್,ನ ಚಿತ್ರದುರ್ಗ ಜಿಲ್ಲಾಧ್ಯಕ್ಷ ಶ್ರೀ ಜುನೈದ್ ಸಖಾಫಿ ಎಂ.ಎಸ್.ಎಂ. ಹಾಗು ತುಮಕೂರಿನ ಉದ್ಯಮಿ ವೆಂಕಟೇಶ್ ಲಾಡ್ ಇವರುಗಳು ಉಪಸ್ಥಿತರಿರುತ್ತಾರೆ.