ಹಾವೇರಿ: ಸುಮಾರು 8-10  ತಿಂಗಳ ಮುದ್ದಾದ ಗಂಡು ಮಗುವೊಂದನ್ನು ಮಹಿಳೆಯೊಬ್ಬಳು ಢಾಬಾಗೆ ತಂದು ಬಿಟ್ಟುಹೋಗಿದ್ದಾಳೆ ಅಷ್ಟಕ್ಕೂ ಢಾಬಾದಲ್ಲಿ ಬಿಟ್ಟು ಹೋದವಳು ಯಾರು?ಈ ಪ್ರಕರಣ ಸದ್ಯಕ್ಕೆ ಭಾರಿ ಕುತೂಹಲವನ್ನೇ ಮೂಡಿಸಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಬಳಿಯ ೪ನೇ ಕ್ರಾಸ್ ಹತ್ತಿರ ಇರುವ ಢಾಬಾವೊಂದಕ್ಕೆ ಮಹಿಳೆಯೊಬ್ಬಳು ಮಗುವೊಂದಿಗೆ ಬಂದಿದ್ದಳು. ಆಟ ಆಡಿಸುತ್ತಿದ್ದಾಕೆ ಹಾಗೇ ಮಗುವನ್ನು ಬಿಟ್ಟು ಹೋಗಿದ್ದಾಳೆ. ಅಳುತ್ತಿದ್ದ ಮಗುವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಗುವಿನ ಫೋಟೋ ಈಗ ವೈರಲ್ ಆಗುತ್ತಿದ್ದು, ವಾರಸುದಾರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಗುವನ್ನು ಬಿಟ್ಟು ಹೋಗಿರುವ ವಿಷಯ ತಿಳಿದ ಹಾನಗಲ್ ಪೊಲೀಸರು ಹಾಗೂ ಹಾನಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷಕುಮಾರ ಅವರು ಮಕ್ಕಳ ಸಹಾಯವಾಣಿ ಸಿಬ್ಬಂದಿ ಸಹಿತ ಆಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರ ಸಲಹೆಯಂತೆ ಮಗುವನ್ನು ಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿಡಲಾಗಿದೆ. ಅನುಮಾನ ಬಂದ ಹಿನ್ನಲೆ ಇದೀಗ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಗುವನ್ನು ಬಿಟ್ಟುಹೋಗಿರುವ ಮಹಿಳೆಯೇ ಅದರ ತಾಯಿಯಾ ಅಥವಾ ಬೇರೆಯವರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಆ ಮಹಿಳೆ ನಾಪತ್ತೆಯಾಗಿದ್ದಾಳೆ.