ಚಿತ್ರದುರ್ಗ: ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಗೆ ಯಾವುದೇ ಮಾನ್ಯತೆ ನೀಡದೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ರೈತ ವಿರೋಧಿಯಾಗಿದೆ ಎಂದು ಬಿಜೆಪಿ.ಜಿಲ್ಲಾ ರೈತ ಮೋರ್ಚ ಅಧ್ಯಕ್ಷ ಡಿ.ರಮೇಶ್ ಕಟುವಾಗಿ ಟೀಕಿಸಿದರು.
ಬಿಜೆಪಿ.ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಎರಡು ಲಕ್ಷ ರೂ.ವರಗಿನ ಸುಸ್ತಿ ಸಾಲ ಮನ್ನ ಮಾಡಿರುವುದರಿಂದ ಎಲ್ಲಾ ರೈತರಿಗೂ ಇದರಿಂದ ಪ್ರಯೋಜನವಿಲ್ಲ. ಜಿಲ್ಲೆಯಲ್ಲಿ ಇದುವರೆವಿಗೂ ೧೮೦ ರೈತರು ಸಾಲದ ಬಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕುಡಿಯವ ನೀರಿಗೆ ಅಭಾವವಿದೆ ಎನ್ನುವುದು ಸರ್ಕಾರಕ್ಕೆ ತಿಳಿದಿದ್ದರೂ ಭದ್ರಾಮೇಲ್ದಂಡೆ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ರಾಜ್ಯದಲ್ಲಿ ಇಸ್ರೇಲ್ ಮಾದರಿಯಲ್ಲಿ ಕೃಷಿ ಅಳವಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಬಜೆಟ್ ವಿರುದ್ದ ಕಿಡಿಕಾರಿದರು.
ಬ್ಯಾಂಕಿನಲ್ಲಿ ಸಾಲ ಇನ್ನಿತರೆ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಕೆಲವು ರೈತರು ತೆರಿಗೆ ಪಾವತಿಸುತ್ತಾರೆ ಅಂತಹ ರೈತರಿಗೆ ಸಾಲ ಮನ್ನ ಉಪಕಾರಿಯಾಗಿಲ್ಲ. ಗ್ರಾ.ಪಂ.,ತಾ.ಪಂ., ಜಿ.ಪಂ.ನ ಕೆಲವು ಸದಸ್ಯರುಗಳಿಗೂ ಸಾಲ ಮನ್ನದಿಂದ ಪ್ರಯೋಜನವಿಲ್ಲ. ಇದೊಂದು ರೈತರ ಹೆಸರೇಳಿ ಮೋಸ ಮಾಡುವ ಬಜೆಟ್ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ರೈತರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮುಖ್ಯಮಂತ್ರಿ ಹೊರಡಿಸಿರುವ ಬಜೆಟ್ ಅಪ್ಪ-ಮಕ್ಕಳ ಬಜೆಟ್ ಎಂದು ಗೇಲಿ ಮಾಡಿದರು.
ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ನಂದಿನಾಗರಾಜ್, ವಕ್ತಾರ ನಾಗರಾಜ್‌ಬೇದ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು