ಮೈಸೂರು:ನಾನು ಮುಖ್ಯಮಂತ್ರಿಯಾಗಿ ಸಂತೋಷದಿಂದ ಅಧಿಕಾರ ನಡೆಸುತ್ತಿದ್ದೇನೆ ಎಂಬ ಭಾವನೆ ಯಾರಿಗೂ ಬರುವುದು ಬೇಡ . ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದರೂ ನಾನು ಸಂತೋಷವಾಗಿಲ್ಲ. ನೋಡುವವರು ನಾನು ಸುಖ ಪಡುತ್ತಿದ್ದೇನೆ ಅಂದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ನಡೆದ ನಾಡ ಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು, ಬಡವರು ಸೇರಿದಂತೆ ನಾಡಿನ ಯಾರೊಬ್ಬರೂ ಕೂಡ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಬೇಡಿ, ರಾಜ್ಯ ಸರ್ಕಾರ ನಿಮಗೋಸ್ಕರವಿದ್ದು, ಪ್ರತಿ ಕುಟುಂಬವನ್ನು ಉಳಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ನಾಡಿನ ಆರೂವರೆ ಕೋಟಿ ಜನರಲ್ಲಿ ಕೈ ಜೋಡಿಸಿ ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರವನ್ನು ನಂಬಿ. ಪ್ರತಿ ಕುಟುಂಬ ನೆಮ್ಮದಿಯಿಂದ ಬದುಕಲು ಹಲವು ಯೋಜನೆಗಳನ್ನು ಜಾರಿಗೆ ತರುವ ಗುರಿ ಹೊಂದಿದೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡು ತಂದೆ-ತಾಯಿ, ಮಕ್ಕಳನ್ನು ಅನಾಥರನ್ನಾಗಿ ಮಾಡಿ ಕಷ್ಟಕ್ಕೆ ದೂಡಬೇಡಿ ಎಂದು ಹೇಳಿದರು