ಮುಂಗಾರು ಮಳೆ ಜೂ.5 ರಿಂದ ಪ್ರವೇಶ: ಹವಾಮಾನ ಇಲಾಖೆ

ನವದೆಹಲಿ : ಭಾರತೀಯ ಹವಾಮಾನ ಇಲಾಖೆ ಯು ಮುಂಗಾರು ಮಳೆ ಕುರಿತು ಮಹತ್ವ ಮಾಹಿತಿಯನ್ನು ನೀಡಿದ್ದು, ನೈರುತ್ಯ ಮುಂಗಾರು ಮಳೆ ಈ ವರ್ಷ ಜೂ.5 ರೊಳಗಾಗಿ ಕರಾವಳಿ ಪ್ರದೇಶವನ್ನು ಅಪ್ಪಳಿಸುವ ಸಾಧ್ಯತೆಯಿದೆಯಂತೆ.

ಈಗಾಗಲೇ ಮುಂಗಾರು ಪೂರ್ವ ಮಳೆ ವಾತಾವರಣ ಮುಂದುವರೆದಿದ್ದು, ಜೂನ್ 1 ರಿಂದ 5 ರ ನಡುವೆ ನೈರುತ್ಯ ಮುಂಗಾರು ಮಾರುತಗಳು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಮೇ 29 ರಿಂದ ಗುಡುಗು ಸಹಿತ ಮಳೆಯಾಗಲಿದ್ದು, ನಂತರ ಜೂನ್ 5 ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ 20 ರೊಳಗೆ ಮುಂಬೈ ತಲುಪಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ,

ಸಾಮಾನ್ಯವಾಗಿ ಜೂ.1ರಂದು ಕೇರಳವನ್ನು ತಲುಪುತ್ತಿದ್ದ ಮುಂಗಾರು ಜೂ.5 ಅಥವಾ ಅದರೊಳಗೆ ಕೇರಳವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ತಿಳಿಸಿದೆ.

ಕೇರಳಕ್ಕೆ ಮಳೆರಾಯನ ಎಂಟ್ರಿಕೊಟ್ಟ ಮೇಲೆ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಮಳೆಗಾಲ ಆರಂಭಗೊಳ್ಳುತ್ತದೆ.ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾದ ಹಿನ್ನೆಲೆ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.. ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿರಲಿದ್ದು, ದಕ್ಷಿಣ ಭಾರತದಲ್ಲಿ ಅಕ್ಟೋಬರ್‌ ಮಧ್ಯಭಾಗದಿಂದ ಮಳೆ ಅಬ್ಬರ ತಗ್ಗುವ ನಿರೀಕ್ಷೆಯಿದೆ.