ಬೆಂಗಳೂರು : ಈ ಬಾರಿಯ ವಿಧಾನಮಂಡಲದ ಅಧಿವೇಶನದಿಂದ ಮಾಧ್ಯಮಗಳನ್ನು ಹೊರಗಿಟ್ಟಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತಮ್ಮ ಕಾರ್ಯಕ್ರಮಗಳಿಂದಲೂ ಮಾಧ್ಯಮಗಳನ್ನು ಹೊರಗಿಟ್ಟಿದ್ದಾರೆ. ಹೀಗಾಗಿ ಎಲ್ಲಾ ಮಾಧ್ಯಮದವರಿಂದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ನಡೆಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಾಸಕರ ಭವನದಲ್ಲಿನ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದ್ದರು. ಇಂತಹ ಕಾರ್ಯಕ್ರಮವನ್ನು ಕವರ್ ಮಾಡಲು ತೆರಳಿದ ಸುದ್ದಿ ಮಾಧ್ಯಮದವರಿಗೆ, ಪೊಲೀಸರು ಅವಕಾಶ ನೀಡಲಿಲ್ಲ. ಅಲ್ಲದೇ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಪೊಲೀಸರು ದರ್ಪ ಮರೆದಿದ್ದಾರೆ.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಾಗೂ ಪೊಲೀಸರ ದರ್ಪಕ್ಕೆ ಆಕ್ರೋಶಗೊಂಡ ಮಾಧ್ಯಮ ಪ್ರತಿನಿಧಿಗಳು, ಮುಖ್ಯಮಂತ್ರಿಯವರ ಎಲ್ಲಾ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದರು. ಜೊತೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮಾಧ್ಯಮದವರು ಮೌನವಾಗಿ ಪ್ರತಿಭಟನೆ ನಡೆಸಿದರು.