ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಕ್ಷಣಗಣೆನೆ ಪ್ರಾರಂಭವಾಗಿದೆ. ಮಾ. 14 ರಂದು ನಡೆಯುವ ಪರಿಶಿಗೆ, ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.

ಇದೊಂದು ಬುಡಕಟ್ಟು ಸಾಂಪ್ರದಾಯದ ಜಾತ್ರೆ ಪ್ರತೀಕ. ಸುಮಾರು 500 ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಬಂದು ಇಲ್ಲಿ ತಮ್ಮ ಅನೇಕ ಪವಾಡಗಳ ಮೂಲಕ ಜನರ ಮನಸ್ಸನ್ನು ಗೆದ್ದ ದೈವ. ಜಾನಪದಗಳಲ್ಲಿ ಹೇಳುವಂತೆ ಸ್ವಾಮಿ ಏಳು ಪುರ, ಏಳು ಕರೆಗಳನ್ನು ಕಟ್ಟಿಸಿದ್ದಾರೆ. ಮಾಡಿದವರಿಗೆ ನೀಡು ಬಿಕ್ಷೆ ಈ ಸ್ವಾಮಿಯ ಅತ್ಯಂತ ಜನಪ್ರಿಯವಾದ ಮಾತು.

ಹೊರಮಠ ಹಾಗೂ ಒಳಮಠ ಸಂಭಂಧಿಸಿದ ಎರಡು ಆರಾಧನಾ ಸ್ಥಳಗಳಾಗಿದ್ದು, ಅವುಗಳನ್ನು ಹೊರಮಠ ಹಾಗೂ ಒಳಮಠ ಎಂದು ಹೆಸರಿಸಲಾಗಿದೆ. ಶ್ರೀ ತಿಪ್ಪೇಸ್ವಾಮಿಗಳು ಜೀವಿತಾವಧಿಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು, ಅದನ್ನು ಒಳಮಠವೆಂದು ಕರೆಯುತ್ತಾರೆ. ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊರಗಡೆ ಚಿಕ್ಕಕೆರೆ ಹತ್ತಿರ ಇದ್ದು, ಇದಕ್ಕೆ ಹೊರಮಠ ಎನ್ನುವರು. ಒಳಮಠದ ಗೋಪುರವು 50 ಅಡಿ ಎತ್ತರವಿದ್ದು, ಅತ್ಯಾಕರ್ಷಕವಾಗಿದೆ. ಒಳಮಠದ ಮುಂದೆ ಜಾತ್ರೆ ಸಂಧರ್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಕೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ. ಈ ಆಚರಣೆಯ ಹಿಂದೆ ವಿಶಿಷ್ಟ ಕತೆಯೇ ಇದೆ. ತಿಪ್ಪೇಸ್ವಾಮಿಯವರು ಮೊದಲಿಗೆ ರಾಯದುರ್ಗದಿಂದ ನಾಯಕನಹಟ್ಟಿಗೆ ಬರುವಾಗ ರಾತ್ರಿ ಕತ್ತಲೆ ಆವರಿಸಿದ್ದು, ಫಣಿಯಪ್ಪನು ಒಣಕೊಬ್ಬರಿಗಳನ್ನು ಕೋಲುಗಳಿಗೆ ಸಿಕ್ಕಿಸಿ ಬೆಂಕಿಯಿಂದ ಹೊತ್ತಿಸಿ, ಆ ಬೆಳಕಿನಲ್ಲಿ ತಿಪ್ಪೇಸ್ವಾಮಿಯವರನ್ನು ಹಟ್ಟಿಗೆ ಕರೆತಂದನಂತೆ. ಆ ಕಾರಣಕ್ಕೆ ಇಂದಿಗೂ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣಕೊಬ್ಬರಿ ಸುಡುವ ಸಂಪ್ರದಾಯ ರೂಢಿಯಲ್ಲಿದೆ. ಅದೇ ರೀತಿ ದುಂಡು ಮೆಣಸು ಎರಚುವ ಸಂಪ್ರದಾಯ ಇಲ್ಲಿ ಇರುತ್ತದೆ. ಹೊರಮಠವನ್ನು ಶ್ರೀ ತಿಪ್ಪೇರುದ್ರಸ್ವಾಮಿ ‘ಗದ್ದುಗೆ’ ಎಂದು, ಒಳಮಠವನ್ನು ಶ್ರೀ ತಿಪ್ಪೇಸ್ವಾಮಿಯ ‘ಮಠ’ವೆಂದು ಕರೆಯುತ್ತಾರೆ.

ಇಂತಹ ಅಭೂತಪೂರ್ವವಾದ ಜಾತ್ರೆಗೆ ಬರಲು ಇನ್ನೇಕೆ ತಡ..!