ಚಿತ್ರದುರ್ಗ: ಮಾಜಿ ಸಂಸದ ಜನಾರ್ಧನಸ್ವಾಮಿರವರಿಗೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ನೀಡುವಂತೆ ಬಹುಜನ ಸಂಘಟನಾ ಸಮಿತಿ ಅಧ್ಯಕ್ಷ ರಾ.ರಮೇಶ್ ಪಕ್ಷದ ವರಿಷ್ಟರನ್ನು ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರತಿ ಚುನಾವಣೆಯಲ್ಲಿಯೂ ಹೊರಗಿನವರು ಬಂದು ಇಲ್ಲಿ ಸ್ಪರ್ಧಿಸಿ ಗೆದ್ದ ಮೇಲೆ ನಂತರ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ಬರಪೀಡಿತ ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಿಂದ ವಂಚಿತವಾಗುತ್ತಿದೆ. ಅದಕ್ಕಾಗಿ ಈ ಸಾರಿಯ ಚುನಾವಣೆಯಲ್ಲಿ ಸ್ಥಳೀಯರಾದ ಜನಾರ್ಧನಸ್ವಾಮಿಗೆ ಟಿಕೇಟ್ ನೀಡುವಂತೆ ಆಗ್ರಹಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಸುರೇಶ್‌ನಾಯ್ಕ ಮಾತನಾಡುತ್ತ ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶ. ಅಭಿವೃದ್ದಿ ಶೂನ್ಯವಾಗಿದೆ. ಹೊರಗಿನವರು ಬಂದು ಇಲ್ಲಿ ಸ್ಪರ್ಧಿಸಿ ಸ್ವಾರ್ಥ ರಾಜಕಾರಣ ಮಾಡಿಕೊಂಡು ಕಾಲ ಕಳೆಯುತ್ತಾರೆ. ಸ್ಥಳೀಯರಾಗಿರುವ ಜನಾರ್ಧನಸ್ವಾಮಿ ಈ ಹಿಂದೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರಿಂದ ಜಿಲ್ಲೆಯ ನಾಡಿ ಮಿಡಿತ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರಿಗೆ ಟಿಕೇಟ್ ನೀಡಿದರೆ ಗೆಲುವಿಗೆ ಶ್ರಮಿಸಿ ಜಿಲ್ಲೆಯ ಅಭಿವೃದ್ದಿಗೆ ಕೈಜೋಡಿಸುತ್ತೇವೆಂದು ಬಿಜೆಪಿ.ನಾಯಕರುಗಳನ್ನು ಕೋರಿದರು.

ರಹಮತ್‌ವುಲ್ಲಾ ಖಾನ್ ಮಾತನಾಡಿ ಜನಾರ್ಧನಸ್ವಾಮಿ ಸ್ಥಳೀಯರಾಗಿರುವುದರಿಂದ ಸುಲಭವಾಗಿ ಎಲ್ಲರ ಕೈಗೂ ಸಿಗುತ್ತಾರೆ. ಹೊರಗಿನವರನ್ನು ಕರೆ ತಂದು ಇಲ್ಲಿ ಸ್ಪರ್ಧಿಸಿ ಅವಕಾಶ ಮಾಡಿಕೊಟ್ಟ ಮೇಲೆ ಚುನಾವಣೆಯಲ್ಲಿ ಗೆದ್ದು ನಂತರ ಕ್ಷೇತ್ರದ ಮತದಾರರಿಗೆ ಚುಕ್ಕಾಣಿ ಕೊಟ್ಟು ಪರಾರಿಯಾಗುತ್ತಾರೆ. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೇಟ್ ಕೊಡಬೇಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದರು.

ರಘುನಾಥ್, ಮಂಜುನಾಥ್, ವೆಂಕಟೇಶ್‌ಗೌಡ್ರು ಹಾಗೂ ಜನಾರ್ಧನಸ್ವಾಮಿ ಅಭಿಮಾನಿಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.