ಬೆಂಗಳೂರು: ಇದೇ ಮೊದಲ ಬಾರಿಗೆ ಕುಟುಂಬ ಸಮೇತ ಯುರೋಪ್ ಪ್ರವಾಸಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ವಿದೇಶದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ವ್ಯಕ್ತವಾಗಿದೆ.

ಸೂಟು, ಬೂಟು ಧರಿಸಿ ಫುಲ್ ಯಂಗ್ ಅಂಡ್ ಎನೆರ್ಜೆಟಿಕ್ ಆಗಿರುವ ಸಿದ್ದರಾಮಯ್ಯ ಅವರು ಸದ್ಯ ರಷ್ಯಾದ ಮಾಸ್ಕೋ ನಗರದ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಂಡ ಅಲ್ಲಿನ ಕನ್ನಡದ ಜನತೆ ಸಂತೋಷಗೊಂಡು ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿದ್ದು, “ಕನ್ನಡ ಮತ್ತು ಕನ್ನಡಿಗರಲ್ಲದ ರಾಷ್ಟ್ರ ಈ ಜಗತ್ತಿನಲ್ಲಿಯೇ ಇಲ್ಲ. ಎಷ್ಟೇ ದೂರದ ದೇಶದಲ್ಲಿದ್ದರೂ ಸದಾ ಕನ್ನಡಕ್ಕಾಗಿ ಮಿಡಿಯುವ ಅವರ ಹೃದಯ, ಕನ್ನಡಿಗರನ್ನು ಕಂಡಾಗ ಅವರು ತೋರುವ ಪ್ರೀತಿ-ಆತ್ಮೀಯತೆ ನನ್ನನ್ನು ಕ್ಷಣ ಕಾಲ ವಿಸ್ಮಿತಗೊಳಿಸಿತು” ಎಂದು ಸಂತೋಷ ಹಂಚಿಕೊಂಡಿದ್ದು, ರಷ್ಯಾದ ಮಾಸ್ಕೋದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಕಳೆದ ಕೆಲವು ಸ್ಮರಣೀಯ ಕ್ಷಣಗಳ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ.