ಭೋಪಾಲ್: ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಎರಡು ಅತ್ಯಾಚಾರ ಪ್ರಕರಣಗಳು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ದಿಲ್ಲಿ ನಿರ್ಭಯಾ ಪ್ರಕರಣವನ್ನು ನೆನಪಿಸುವ ರೀತಿಯಲ್ಲಿ, ಸಿದ್ಧಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಮೂವರು ಆಕೆಗೆ ಕಬ್ಬಿಣದ ರಾಡ್‌ನಿಂದ ಚಿತ್ರಹಿಂಸೆ ನೀಡಿದ್ದಾರೆ; ಮತ್ತೊಂದು ಪ್ರಕರಣದಲ್ಲಿ ಖಂಡ್ವಾ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ 45 ವರ್ಷದ ವ್ಯಕ್ತಿಯೊಬ್ಬ, ಪ್ರಕರಣ ಮುಚ್ಚಿಹಾಕುವ ಸಲುವಾಗಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಸಿದ್ಧಿ ಜಿಲ್ಲೆಯ ಅಮಿಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೊದಲ ಪ್ರಕರಣದಲ್ಲಿ, ಚಹಾ ಅಂಗಡಿ ನಡೆಸುತ್ತಿದ್ದ 45 ವರ್ಷದ ಮಹಿಳೆ ತನ್ನ ಗುಡಿಸಲಲ್ಲಿ ಮಲಗಿದ್ದಾಗ ಆರೋಪಿಗಳು ಬಂದು ಬಾಗಿಲು ಬಡಿದು ನೀರು ಕೇಳುವ ನೆಪದಲ್ಲಿ , ಯಾರೂ ಇಲ್ಲ ಎಂದು ಮಹಿಳೆ ಹೇಳಿದಾಗ ಗುಡಿಸಲಿಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಬ್ಬಿಣದ ಸಲಾಕೆಯಿಂದ ಚಿತ್ರಹಿಂಸೆ ನೀಡಿದ್ದಾರೆ. ಮಹಿಳೆಯ ಪತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ. ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಹಾಗೂ ಬಳಿಕ ರೇವಾ ಸಂಜಯ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬ0ಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಐಜಿಪಿ ಉಮೇಶ್ ಜೋಹಾ ಹೇಳಿದ್ದಾರೆ.