ಚಿತ್ರದುರ್ಗ: ಮಳೆ ನೀರಿನಿಂದ ತುಂಬಿರುವ ಗುಂಡಿಗಳಲ್ಲಿ ಗಿಡಗಳನ್ನು ನೆಡುವ ಮೂಲಕ ನಗರದಲ್ಲಿ ಅದ್ವಾನವಾಗಿರುವ ರಸ್ತೆಗಳನ್ನು ನಗರಸಭೆಯವರು ಸರಿಪಡಿಸಲಿ ಎಂದು ಪ್ರಜ್ಞಾವಂತರು ಶನಿವಾರ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ಕಳೆದ ಹದಿನೈದು ದಿನಗಳಿಂದಲೂ ಸತತವಾಗಿ ನಗರದಲ್ಲಿ ಮಳೆ ಸುರಿಯುತ್ತಿರುವುದರಿಂದ ಚಿಂದಿಯಾಗಿರುವ ರಸ್ತೆಯ ಗುಂಡಿಗಳಲ್ಲಿ ಮೊಣಕಾಲುದ್ದು ನೀರು ನಿಂತಿರುವುದನ್ನು ನೋಡದೆ ಕೆಲವು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಬಿದ್ದು ಅನಾಹುತ ಮಾಡಿಕೊಂಡಿದ್ದಾರೆ. ಚಿತ್ರದುರ್ಗದ ನಾಲ್ಕು ದಿಕ್ಕಿನಲ್ಲಿ ಯಾವ ಕಡೆ ಹೋದರು ರಸ್ತೆಯಲ್ಲಿ ತಗ್ಗು ಗುಂಡಿಗಳಷ್ಠೆ ಅಲ್ಲ ಕೊರಕಲಿನಿಂದ ಕೂಡಿದ್ದು, ವಾಹನ ಸವಾರರು ಕಸರತ್ತು ಮಾಡಿಕೊಂಡು ಸಂಚರಿಸುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಲಾದರು ನಗರಸಭೆ ಇಲ್ಲವೇ ಜಿಲ್ಲಾಡಳಿತ ಗಮನ ಹರಿಸಿ ಕೂಡಲೆ ರಸ್ತೆಗಳನ್ನು ದುರಸ್ಥಿಪಡಿಸಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಅರುಣ್‌ಕುಮಾರ್, ಮಹಡಿ ಶಿವಮೂರ್ತಿ, ಆರ್.ಶೇಷಣ್ಣಕುಮಾರ್ ಇನ್ನು ಮುಂತಾದವರು ಗಿಡ ನೆಡುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.