ದಾವಣಗೆರೆ : ಮ್ಯಾಂಚೆಸ್ಟರ್ ನಗರವೆಂದು ಖ್ಯಾತಿ ಪಡೆದ ರಾಜ್ಯದ ಹೃದಯಭಾಗವೆಂದು ಕರಯಲ್ಪಡುವ ದಾವಣಗೆರೆಯಲ್ಲಿ ನಾಳೆ ನರೇಂದ್ರ ಮೋದಿಯವರು ರೈತರ ಸಮಾವೇಶದಲ್ಲಿ ಭಾಗವಹಸಿ , ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯಿಂದ ರೈತ ಸಮಾವೇಶ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ನಗರದ ಹೈಸ್ಕೂಲ್ ಮೈದಾನ ಸಮಾವೇಶಕ್ಕೆ ಸಜ್ಜಾಗುತ್ತಿದ್ದು, 40 ಅಡಿ ಉದ್ದ, 50 ಅಡಿ ಅಗಲದ ವೇದಿಕೆ ತಯಾರಾಗಿದೆ. 12 ಆಸನಗಳಿಗಷ್ಟೇ ಅವಕಾಶವಿದ್ದು, ಹಿಂಬದಿಯಲ್ಲಿ ಎಲ್ ಎಡಿ ಪರದೆ ಇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದಕ್ಕಾಗಿ 70 ಸಾವಿರ ಕುರ್ಚಿ ಹಾಕಲಾಗುತ್ತಿದೆ.

ನಾಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಟ್ಟಿದ ಹಬ್ಬ, ಹಾಗಾಗಿ ಈ ಸಮಾವೇಶಕ್ಕೆ ರೈತ ಬಂಧು ಯಡಿಯೂರಪ್ಪ ಎಂದೇ ಹೆಸರಿಡಲಾಗಿದೆ. ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಬಿಎಸ್ ವೈಗೆ ಸಾಂಕೇತಿಕವಾಗಿ ನೇಗಿಲು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.