ಚಿತ್ರದುರ್ಗ: ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಚಳ್ಳಕೆರೆಯಲ್ಲಿ ನಿಧನರಾದ ಚಿತ್ರದುರ್ಗ ರಾಜವಂಶಸ್ಥರಾದ ಪಿ.ಆರ್. ವೀರಭದ್ರನಾಯಕ್ (೭೦) ಇವರ ನಿಧನಕ್ಕೆ ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಹಾಗು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಕಳೆದ ೩ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಮಠದಿಂದ ಉಚಿತ ಚಿಕಿತ್ಸೆಯ ನೆರವನ್ನು ನೀಡಲಾಗಿತ್ತು.

ಪ್ರತಿವರ್ಷ ಕೋಟೆಯೊಳಗಿನ ಮಠದಲ್ಲಿ ನಡೆಯುತ್ತಿದ್ದ ಶರಣಸಂಸ್ಕೃತಿ ಉತ್ಸವದ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತ ಬಂದಿದ್ದರು. ಇದಲ್ಲದೆ, ಹಿರಿಯ ಸಂಶೋಧಕರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಮತ್ತು ಡಾ. ಬಿ.ರಾಜಶೇಖರಪ್ಪ ಮುಂತಾದವರಿಗೆ ಸಂಶೋಧನೆಗೆ ಸಹಕರಿಸಿದ್ದನ್ನು ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಅನ್ಯಕಾರ್ಯಕ್ರಮಗಳ ನಿಮಿತ್ತ ಶ್ರೀಮಠದಲ್ಲಿ ಇಲ್ಲದಿರುವುದರಿಂದ ಶ್ರೀಮಠದ ಪರವಾಗಿ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳವರನ್ನು ಕಳುಹಿಸಿದ್ದು, ಶ್ರೀಗಳು ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ವೀರಭದ್ರನಾಯಕ್ ನಿಧನಕ್ಕೆ ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಕೆ.ವಿ.ಪ್ರಭಾಕರ್, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಈ. ಚಿತ್ರಶೇಖರ್, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಸಂಸದ ಬಿ.ಎನ್. ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಬೋರನಾಯಕ, ಬಿ. ತಿಪ್ಪೇಸ್ವಾಮಿ, ನಿಸರ್ಗ ಗೋವಿಂದರಾಜ್, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಬಿ. ರಾಜಶೇಖರಪ್ಪ, ಡಾ. ಜಿ.ವಿ. ಆನಂದಮೂರ್ತಿ ಹಾಗು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎಲ್ಲ ಸಿಬ್ಬಂದಿವರ್ಗವರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ.