ಚಿತ್ರದುರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು ಇದೇ ಜನವರಿ 22 ರ ವರಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳಿದ್ದಲ್ಲಿ ಅವುಗಳನ್ನು ಸೇರ್ಪಡೆ ಮಾಡಲು ಅವಕಾಶ ಇದ್ದು ತಮ್ಮ ಎಲ್ಲಾ ಕಾರ್ಯಕರ್ತರಿಗೆ ಮಾಹಿತಿ ನೀಡುವ ಮೂಲಕ ತಮ್ಮಿಂದಲೂ ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
2018 ರ ಜನವರಿ 1 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವ ಮತದಾರರನ್ನು ಹೊಸದಾಗಿ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ. ವಿಶೇಷವಾಗಿ 18 ರಿಂದ 21 ವರ್ಷಗಳ ಅವಧಿಯಲ್ಲಿನ ಯುವ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಹಾಗೂ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಹೆಸರು ತಿದ್ದುಪಡಿ, ಮತಗಟ್ಟೆ ವರ್ಗಾವಣೆ ಮತ್ತು ಕ್ಷೇತ್ರ ಬದಲಾವಣೆ ಇದ್ದಲ್ಲಿ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಆಯೋಗ ಅವಕಾಶ ಕಲ್ಪಿಸಿದೆ. ಹಕ್ಕು ಮತ್ತು ಆಕ್ಷೇಪಣೆಗಳಲ್ಲಿ ಸಲ್ಲಿಸಲು ಜ.22 ರ ವರೆಗೆ ಅವಕಾಶ ನೀಡಿದೆ. ಫೆ.12 ರಂದು ಎಲ್ಲಾ ಆಕ್ಷೇಪಣೆಗಳನ್ನು ವಿಲೆ ಮಾಡಲಾಗುತ್ತದೆ, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 28 ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಬೇಕೆಂದು ಸಭೆ ನಡೆಸಲಾಗುತ್ತಿದೆ. ರಾಜಕೀಯ ಪಕ್ಷಗಳಿಂದ ಮತದಾರರ ಪಟ್ಟಿ ಕುರಿತಂತೆ ಏನಾದರೂ ದೂರುಗಳಿದ್ದಲ್ಲಿ ಅದನ್ನು ಸ್ವೀಕರಿಸಲಾಗುತ್ತದೆ. ಈ ಹಿಂದೆ ನವಂಬರ್ 30 ರಂದು ಪ್ರಕಟಿಸಲಾದ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು 1321272 ಮತದಾರರಿದ್ದಾರೆ. ಈ ವೇಳೆ ಹೊಸದಾಗಿ ಹೆಸರು ಸೇರ್ಪಡೆಗೆ 26246 ಅರ್ಜಿಗಳನ್ನು ಸ್ವೀಕರಿಸಲಾಗಿ ಇದೇ ವೇಳೆ ಬೇರೆಡೆಗೆ ವರ್ಗಾವಣೆಯಾದÀ, ಮರಣ ಹೊಂದಿದ 32459 ಮತದಾರರನ್ನು ಪಟ್ಟಿಯಿಂದ ಕೈಬಿಡಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಜಿಲ್ಲೆಯಲ್ಲಿ 2018 ಕ್ಕೆ ಜನವರಿಯಲ್ಲಿ ಇರಬೇಕಾದ ಜನಸಂಖ್ಯೆ 1771032 ಎಂದು ಅಂದಾಜಿಸಲಾಗಿದೆ ಎಂದರು.
ಮತದಾರರ ಪರಿಷ್ಕರಣೆ ಅವಧಿಯನ್ನು ಪುನಃ ಜನವರಿ 12 ರ ವರೆಗೆ ವಿಸ್ತರಿಸಲಾಗಿತ್ತು, ನಂತರ ಈಗ ಜ.22 ರ ವರೆಗೆ ಪರಿಷ್ಕರಣೆ ಅವಧಿ ವಿಸ್ತರಿಸಲಾಗಿದೆ. ಈ ಸಮಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಂದ ಈಗಾಗಲೇ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಏಜೆಂಟರ ವಿವರವನ್ನು ನೀಡಬೇಕು. ಚುನಾವಣಾ ಆಯೋಗದಿಂದ ಬಂದಂತಹ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು ಮತಗಟ್ಟೆಯ ಮಟ್ಟದ ಏಜೆಂಟರಿಗೂ ಸಹ ಮತಗಟ್ಟೆ ಅಧಿಕಾರಿಗಳ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಯಾವುದೇ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೋಳ್ಳಬೇಕು. ಈ ಕೆಲಸದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸಹ ಭಾಗಿಯಾಗಿ ಕೈಬಿಟ್ಟು ಹೋದ ಪ್ರಕರಣಗಳನ್ನು ಗಮನಕ್ಕೆ ತಂದಲ್ಲಿ ಸೇರ್ಪಡೆ ಮಾಡಲು ಅಥವಾ ಕೈಬಿಡಲು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾನದ ವೇಳೆ ಹೆಸರು ಬಿಟ್ಟಿದೆ, ತಪ್ಪಾಗಿದೆ ಎಂಬ ಅಭಿಪ್ರಾಯ ಯಾರಿಂದಲೂ ಬರಬಾರದು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮತದಾನದಲ್ಲಿ ಮತ್ತಷ್ಟು ಪಾರದರ್ಶಕತೆ;
ಚುನಾವಣೆಯಲ್ಲಿ ಮತದಾನ ಮಾಡಲು ಎಲೆಕ್ಷ್ಟಾನಿಕ್ಸ್ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಭಾರಿ ಇದರೊಂದಿಗೆ ವಿ.ವಿ.ಪ್ಯಾಟ್‍ನ್ನು ಅಳವಡಿಸಲಾಗುತ್ತಿದೆ. ಮತದಾನ ಗುಪ್ತವಾಗಿದ್ದು ನಾವು ಯಾವುದಕ್ಕೆ ಮತದಾನ ಮಾಡಿದ್ದೇವೆ ಎಂದು ಮತ್ತೊಮ್ಮೆ ಖಾತರಿಪಡಿಸಿಕೊಳ್ಳಲು ಹೆಚ್ಚುವರಿಯಾಗಿ ವಿ.ವಿ.ಪ್ಯಾಟ್ ಯಂತ್ರ ಅಳವಡಿಸಿ ನಾವು ಮತದಾನ ಮಾಡಿದ ವಿವರ ಮುದ್ರಣಗೊಂಡು ನಮ್ಮ ಕಣ್ಣುಮುಂದೆ ಬರುತ್ತದೆ. ಇದನ್ನು ವೀಕ್ಷಣೆ ಮಾಡಲು 7 ಸೆಕೆಂಡುಗಳ ಅವಕಾಶ ಇರುತ್ತದೆ. ಮುದ್ರಣಗೊಂಡ ನಂತರ ಗ್ಲಾಸ್‍ನಲ್ಲಿ ಕಾಣುವಂತೆ ಅಳವಡಿಸಲಾಗಿರುತ್ತದೆ. ಇದು ಏಳು ಸೆಕೆಂಡುಗಳವರೆಗೆ ಇರುತ್ತದೆ, ನಂತರ ಮತಪೆಟ್ಟಿಗೆಗೆ ಹೋಗುತ್ತದೆ. ಇದು ಮತದಾನ ಮಾಡಿದವರಿಗೆ ಮಾತ್ರ ನೋಡಲು ಅವಕಾಶ ಇರುತ್ತದೆ. ಆದರೆ ಇದನ್ನು ತೆಗೆಯಲು, ಬೇರೆಯವರು ವೀಕ್ಷಣೆ ಮಾಡಲು ಅವಕಾಶ ಇಲ್ಲದಂತೆ ಶೀಲ್ಡ್ ಮಾಡಲಾಗಿರುತ್ತದೆ. ಎಲ್ಲಾ ಚುನಾವಣಾ ಪ್ರಕ್ರಿಯೆಗಳು ಪಾರದರ್ಶಕವಾಗಿರುತ್ತದೆ. ಮತಯಂತ್ರ ಮತ್ತು ಇದಕ್ಕೆ ಜೋಡಿಸಲಾದ ವಿ.ವಿ.ಪ್ಯಾಟ್ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿತೆಗಳ ಮೂಲಕ ತೋರಿಸಲಾಗುತ್ತದೆ ಎಂದರು.
ಮೊಬೈಲ್‍ನಲ್ಲಿ ನಿಮ್ಮ ಮತದಾರರ ಪಟ್ಟಿ ಪರಿಶೀಲಿಸಿ;
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಲು 9731979899 ಸಂಖ್ಯೆಗೆ ಎಸ್.ಎಂ.ಎಸ್.ಕಳುಹಿಸುವ ಮೂಲಕ ಖಾತರಿ ಮಾಡಿಕೊಳ್ಳಬಹುದಾಗಿದೆ. ಹೇಗೆ ಮಾಹಿತಿ ಪಡೆಯುವುದು ಮೆಸೇಜ್‍ಗೆ ಹೋಗಿ ಇಲ್ಲಿ ಮೊದಲು ಏಂಇPIಅ ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ, ನಂತರ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಟೈಪ್ ಮಾಡಿದ ನಂತರ ಈ 9731979899 ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್.ಕಳುಹಿಸಿ ಕ್ಷಣಾರ್ಧದಲ್ಲಿ ನಿಮ್ಮ ಅಂಗೈನಲ್ಲಿನ ಮೊಬೈಲ್‍ಗೆ ವಿವರ ಬರುತ್ತದೆ. ಅಥವಾ ವೆಬ್‍ಸೈಟ್‍ನಲ್ಲಿ ಹುಡುಕಲು ಅವಕಾಶ ಇದ್ದು www.ceokarnataka.kar.nic.in ನಲ್ಲಿಯು ವೀಕ್ಷಣೆ ಮಾಡಬಹುದಾಗಿದೆ.
ಚುನಾವಣಾ ಮಾಹಿತಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ದೂರುಗಳನ್ನು ಸ್ವೀಕರಿಸಲು 08194-222176 ಸಹಾಯವಾಣಿ ಸ್ಥಾಪಿಸಲಾಗಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಆಯೋಗದ 1950 ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಚುನಾವಣಾ ತಹಶೀಲ್ದಾರ್ ಪ್ರತಿಭಾ, ಚಿತ್ರದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನ್, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಕಲ್ಲೇಶ್, ಜೆ.ಡಿ.ಎಸ್. ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು