ಬೆಂಗಳೂರು:ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗವು ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ. ಏ. 8 ರಂದು ಎಲ್ಲಾ ಮತಗಟ್ಟೆಗಳಲ್ಲೂ ಅಭಿಯಾನ ನಡೆಯಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಹೇಳಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಲ್ಲವೆಂದಾರೆ, ಅಥವಾ ವರ್ಗಾವಣೆ, ತಿದ್ದುಪಡಿ, ಹೆಸರು ಸೇರ್ಪಡೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು, ಬೇಕಿರುವ ದಾಖಲೆಗಳೇನು ಎಂಬ ಗೊಂದಲವಿದ್ದರೆ ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 8ರಂದು ಬೆಳಗ್ಗೆ 10 ರಿಂದ ಸಂಜೆ 5ಗಂಟೆಯವರೆಗೆ 8278 ಮತಗಟ್ಟೆಗಳಲ್ಲಿ ‘ಮಿಂಚಿನ ನೋಂದಣಿ’ ಅಭಿಯಾನವನ್ನು ನಡೆಯಲಿದ್ದು, ಜನರು ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಬೇಕು.
18 ವರ್ಷ ಪೂರೈಸಿದ, ಸತತ ಆರು ತಿಂಗಳಿನಿಂದ ಒಂದೇ ಪ್ರದೇಶದಲ್ಲಿ ನೆಲೆಸಿರುವವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರು. ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಾಸ ಸ್ಥಳ ಬದಲಾಯಿಸಿರುವವರು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ವಾಸ ಸ್ಥಳ ದೃಢೀಕರಣ ಪ್ರತಿ, ಚಾಲನಾ ಪರವಾನಗಿ, ಪಡಿತರ ಚೀಟಿ, ಬಾಡಿಗೆ ಕರಾರುಪತ್ರ, ಗ್ಯಾಸ್‌ ಸ್ವೀಕೃತಿ ಪತ್ರ, ಪಾಸ್‌ಪೋರ್ಟ್‌, ವಿದ್ಯುತ್‌ ಬಿಲ್‌ ಪಾವತಿ ಪ್ರತಿ, ಆಧಾರ್‌, ಬ್ಯಾಂಕ್‌ ಪಾಸ್‌ ಬುಕ್‌ ಸೇರಿದಂತೆ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಕೊಡಬೇಕು.

ಇನ್ನು ಹೊಸದಾಗಿ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲಾ-ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ತಂದೆ-ತಾಯಿ ಅಥವಾ ಪೋಷಕರ ಮತದಾರರ ಗುರುತಿನ ಚೀಟಿಯ ಪ್ರತಿ, ಒಂದು ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಭರ್ತಿ ಮಾಡಿದ ಅರ್ಜಿಯ ದ್ವಿಪ್ರತಿ ಸಲ್ಲಿಸಿದರೆ ನೀವು ಮತದಾರರಾಗುತ್ತೀರ.!