ಮಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಬದಲಾಯಿಸಲಾಗುತ್ತದೆ ಎನ್ನುವುದು ಸಿದ್ದರಾಮಯ್ಯನವರ ಹಗಲುಗನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಟೀಕಿಸಿದ್ದಾರೆ. ಅವರು ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮತ್ತು ನಾಯಕರ ಸಂಘಟಿತ ಪ್ರಯತ್ನದಿಂದ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಂದ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಎಂದು ನಳಿನ್ ನುಡಿದರು.

ಮತದಾರರು ಕಾಂಗ್ರೆಸ್ ನ ಬಂಡೆ ಒಡೆದಿದ್ದಾರೆ, ಹುಲಿಯಾ ಗೂಡು ಸೇರುವಂತೆ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ನ ಹಿರಿಯ ಮುಖಂಡರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ನಳಿನ್ ಕುಮಾರ್ ಪರೋಕ್ಷವಾಗಿ ಟೀಕಿಸಿದರು.

ಕಾಂಗ್ರೆಸ್ ನ ನಾಯಕರ ನಡುವಿನ ಒಳಜಗಳದಿಂದ ಮತದಾರರು ಅವರನ್ನು ಕಿತ್ತೆಸೆದಿದ್ದಾರೆ. ಕರ್ನಾಟಕದಲ್ಲಿ ನೆರೆ , ಬರ, ಕೋವಿಡ್ ಸಮಸ್ಯೆಗಳನ್ನು ಸಮರ್ಥ ವಾಗಿ ನಿಭಾಯಿಸಿದ ಯಡಿಯೂರಪ್ಪ ಅವರ ಮೇಲಿನ ಜನರ ವಿಶ್ವಾಸ ಉಪ ಚುನಾವಣೆಯಲ್ಲಿ ವ್ಯಕ್ತವಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.

ದೇಶದಲ್ಲಿ ಬಿಜೆಪಿ ಪರ, ಮೋದಿ ಅಲೆ ಇದೆ. ಇದನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕಾಗಿದೆ. ದೇಶದ ವಿವಿಧ ಕಡೆಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಬಿಹಾರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ ಎಂದವರು ಹೇಳಿದರು.

ರಾಜ್ಯದ ವಿಧಾನ ಪರಿಷತ್ ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಜಯಬೇರಿ ಬಾರಿಸಿದೆ. ಬಿಜೆಪಿ ಸಂಘಟಿತ ಪ್ರಯತ್ನದಿಂದ ಉಪ ಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ವಕ್ತಾರ ರವಿಶಂಕರ್ ಮಿಜಾರ್, ಜಗದೀಶ್ ಶೇಣವ ಮೊದಲಾದವರು ಉಪಸ್ಥಿತರಿದ್ದರು.