ಚಿತ್ರದುರ್ಗ: ಪೋಷಕರು ತಮ್ಮ ಮಕ್ಕಳ ಅನಿಸಿಕೆ, ಭಾವನೆ, ಇಷ್ಟಗಳನ್ನು ಧಮನ ಮಾಡದೆ ಅವರ ಇಚ್ಛೆಯಿಂತೆ ಅರಳಲು ಬಿಡಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ತಿಳಿಸಿದ್ದಾರೆ.
ಚಿತ್ರದುರ್ಗ ಜಿ.ಪಂ. ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಸೇವಾ ದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ ಜವಾಹರ್‌ಲಾಲ್ ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಮಕ್ಕಳ ಸ್ವಭಾವ, ಪ್ರತಿಭೆಯನ್ನು ಮನೆಯಿಂದಲೇ ಗುರುತಿಸಿ ಸ್ಪಂದಿಸಿ ಪ್ರೋತ್ಸಾಹಿಸಲು ಅವರು ಸಲಹೆ ಮಾಡಿದರು. ಮಕ್ಕಳ ಬೇಡಿಕೆಗಳಿಗೆ, ಇಷ್ಟ-ಕಷ್ಟಗಳಿಗೆ ಪೋಷಕರು ಕಿವಿಗೊಟ್ಟು ಈಡೇರಿಸುವ ಮೂಲಕ ಅವರವರ ಅಭಿರುಚಿಗೆ ತಕ್ಕಂತೆ ಶಿಕ್ಷಣಪಡೆಯಲು, ಅವರು ಬಯಸಿದ ರಂಗಗಳಲ್ಲಿ ಸಾಧನೆ ಮಾಡಲು ಅನುವು ಮಾಡಿಕೊಡಬೇಕೆಂದು ನ್ಯಾಯಾಧೀಶರು ತಿಳಿಸಿದರು.
ಬಾಲ್ಯದಲ್ಲಿ ಕಲಿತ ಆರು ವರ್ಷಗಳ ಶಿಕ್ಷಣ, ನೈತಿಕತೆ, ಶಿಸ್ತು ಅರವತ್ತು ವರ್ಷಗಳ ನೆಮ್ಮದಿಯ ಜೀವನಕ್ಕೆ ಬುನಾದಿಯಾಗಲಿದೆ. ಒಳ್ಳೆಯ ಶಿಕ್ಷಣ ಪಡೆದ ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ೧ ರಿಂದ ೧೫ ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡದಿರುವುದು, ಅಪ್ರಾಪ್ತ ಮಕ್ಕಳಿಗೆ ವಿವಾಹ ಮಾಡುವುದು, ೧೮ ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಮಟ್ಟುವುದು, ಅಪಹರಿಸಿ ಸಾಗಣೆ ಮಾಡುವುದು, ಅವರ ಇಷ್ಟದ ವಿರುದ್ದ ಅವರನ್ನು ದುರುಪಯೋಗಪಡಿಸಿಕೊಳ್ಳುವುದು ಎಲ್ಲವೂ ಕಾನೂನುಬಾಹಿರವಾಗಿದ್ದು, ಇಂತಹ ಘಟನೆ ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ನಂ.೧೦೯೮ ಕ್ಕೆ ಕರೆ ಮಾಡಲು ಅವರು ತಿಳಿಸಿದರು. ಒಟ್ಟಾರೆ ಮಕ್ಕಳ ಸಂರಕ್ಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶ್ರೀಮತಿ ವಿ.ವಿ.ಜೋತ್ಸ್ನಾ ಅವರು ಮಾತನಾಡಿ ಮಕ್ಕಳ ಸಂರಕ್ಷಣೆಗೆ ಹಲವಾರು ಕಾನೂನುಗಳಿವೆ. ಮಕ್ಕಳಿಗೆ ಅವರದೇ ಆದ ಸಾಕಷ್ಟು ಹಕ್ಕುಗಳಿವೆ. ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು, ಸಮಾಜದಲ್ಲಿ ಎಲ್ಲರಂತೆ ಗೌರವದಿಂದ ಬದುಕುವ ಹಕ್ಕು, ನಿಮ್ಮ ದೇಹದ ಅಂಗಾಂಗಗಳ ಮೇಲೆ ನಿಮ್ಮ ಹಕ್ಕು ಮಾತ್ರ ಇದೆ. ಬೇರೆಯವರು ನಿಮ್ಮನ್ನು ಪುಸಲಾಯಿಸಿ “ಅನ್‌ಟಚ್“ ಮಾಡಿದರೆ “ನೋ“ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಅರ್ಧಕ್ಕೆ ಶಾಲೆ ಬಿಟ್ಟ ಸಾವಿರಾರು ಮಕ್ಕಳನ್ನು ಪುನ: ಶಾಲೆಗೆ ಕರೆತರುವ ಮೂಲಕ ಮಕ್ಕಳ ಹಕ್ಕನ್ನು ಸಂರಕ್ಷಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರ ನೀಡಿದ ಅಧಿಕಾರಿಗಳ ಕಾರ್ಯ ಪ್ರಶಂಸನೀಯವೆಂದರು.
ಗೌಪ್ಯವಾಗಿ ಮಕ್ಕಳಿಗೆ ತಿಂಡಿ, ತಿನಿಸು, ಚಾಕಲೇಟ್, ಐಸ್‌ಕ್ರೀಂ ನೀಡಿ ಪುಸಲಾಯಿಸುವುದು ಅಪಾಯಕಾರಿ ನಡೆ ಎಂದು ಮಕ್ಕಳು ಅರಿತು ಅವರಿಂದ ದೂರವಿರಲು, ಬೇರೆಯವರಿಂದ ನಿಮಗೆ ತೊಂದರೆ, ಕಿರುಕುಳ, ಕಷ್ಟವಾಗುತ್ತಿದ್ದರೆ ಕೂಡಲೇ ಮಕ್ಕಳ ಸಹಾಯವಾಣಿ ನಂ.೧೦೯೮ ಕ್ಕೆ ಕರೆ ಮಾಡಿದಲ್ಲಿ ಜಿಲ್ಲಾಡಳಿತ ನಿಮ್ಮ ಸಹಾಯಕ್ಕೆ ಬರುವುದು ಎಂದು ಭರವಸೆ ನೀಡಿದರು. ಮಕ್ಕಳನ್ನು ಒಳ್ಳೆಯ ಪ್ರಜೆಯನ್ನಾಗಿ ಸಂರಕ್ಷಣೆ ಮಾಡುವುದು ಮನೆಯಿಂದಲೇ ಎಂಬುದನ್ನು ಯಾರೂ ಮರೆಯಬಾರದು ಎಂದು ಸಲಹೆ ಮಾಡಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೇಳುವ ಪ್ರತಿಯೊಂದು ಮಾತನ್ನು ಸರಿಯಾಗಿ ಕೇಳಿ ಅವರು ನೀಡುವ ಸಂದೇಶದ ಒಳ ಅರ್ಥವನ್ನು ಗ್ರಹಿಸಲು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಜಿಲ್ಲೆಯ ೧೪ ಯುವ ಪ್ರತಿಭಾವಂತರಿಗೆ ಹಾಗೂ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ೪ ಯುವಕ್ರೀಡಾಪಟುಗಳಿಗೆ ಶಾಲು ಹೊದಿಸಿ, ಪ್ರಶಸ್ತಿ ಪತ್ರ ನೀಡಿ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಿ.ಕೆ.ಶೀಲಾ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ೨೦೧೨ ರ ಕಾಯ್ದೆ ಕುರಿತು, ಸುಮನ ಎಸ್.ಅಂಗಡಿ ಅವರು ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಪ್ರಥಮ ದರ್ಜೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್.ಎಂ.ವಿರೂಪಾಕ್ಷಯ್ಯ, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರೇವಣಸಿದ್ದಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ: ಆರ್.ಪ್ರಬಾಕರ್, ಸದಸ್ಯರುಗಳಾದ ಜಿ.ಟಿ.ಬಸವರಾಜ್, ಟಿ.ಜಗದೀಶ್, ಮಧುಕರ್, ಇತರ ಗಣ್ಯರುಗಳು ಉಪಸ್ಥಿತರಿದ್ದರು. ಉಪನಿರ್ದೇಶಕ ಕೆ.ಎಸ್.ರಾಜಾನಾಯ್ಕ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೈಶಾಲಿ ವಂದಿಸಿದರು.