ಚಿತ್ರದುರ್ಗ: ಭೋವಿ ಸಮಾಜದ ಹಿತದೃಷ್ಠಿಯಿಂದ ನಮ್ಮ ಆದ್ಯತೆ ನೋಟಾ ಎಂದು ಹೇಳುತ್ತಿದ್ದೇನೆ. ಆದರೆ ಜನಾಂಗದ ಹಿತದೃಷ್ಠಿಯಿಂದ ನೋಟಾ ಬೇಡ ಎಂದಾದರೆ ಸಮಾಜದ ಶಾಸಕರು ಮತ್ತು ಮುಖಂಡರ ಚರ್ಚಿಸಿ ಯಾರನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸುತ್ತೇವೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರಿಗೆ ಗೌರವ ಸಮರ್ಪಿಸಿದ ನಂತರ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಮಠಕ್ಕೆ ಭೇಟಿ ನೀಡಿ, ಸಮಾಜದ ಆಗು–ಹೋಗುಗಳ ಬಗ್ಗೆ ಚರ್ಚಿಸಿದರು. ಅವರ ಅಧಿಕಾರದ ಅವಧಿಯಲ್ಲಿ ಭೋವಿ ಸಮುದಾಯಕ್ಕೆ ನೀಡಿದ ಸ್ಥಾನಮಾನಗಳ ಕುರಿತು ಚರ್ಚಿಸಲಾಯಿತು.

ಮುಂದಿನ ದಿನಗಳಲ್ಲಿ ಭೋವಿ ಜನಾಂಗಕ್ಕೆ ತಮ್ಮ ಬೆಂಬಲ ಇರಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಲ್ಲಿ ಶ್ರೀಗಳು ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಮುಖಂಡರಾದ ಗೋಡೆ ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಚಳ್ಳಕೆರೆ ಅಂಜಿನಪ್ಪ, ಭೋವಿ ಸಮಾಜದ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಡಾ.ಮಂಜುನಾಥ ಸ್ವಾಮಿ  ಅವರೂ ಇದ್ದರು.