ಚಿತ್ರದುರ್ಗ: ಬಿಜೆಪಿ ಜೊತೆ ಪ್ರಯಾಣ ಸಾಧ್ಯವಿಲ್ಲ ಎಂದು ಭೋವಿ ಗುರುಪೀಠದ ಅಧ್ಯಕ್ಷರಾದ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರವರಿಗೆ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠಕ್ಕೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪರವರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಜೊತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಸಮಾಜದ ಹಿತ ಮೊದಲ ಆದ್ಯತೆ, ಸಮಾಜಕ್ಕೆ ಧಕ್ಕೆಯಾಗುವಂತ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನೀವು ಈಗ ಟಿಕೆಟ್ ಕೊಟ್ಟಿರುವ ಅಭ್ಯರ್ಥಿ ನಿಮಗೆ ಸೂಕ್ತವಾಗಿರಬಹುದು. ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಸಮುದಾಯ ಅತಾಯಷಯದಲ್ಲಿದೆ ಸಧ್ಯಕ್ಕೆ ನಾವು ಬಿಜೆಪಿ ಜೊತೆ ಪ್ರಯಾಣಿಸಲು ಸಾಧ್ಯವಿಲ್ಲ. ರಾಜ್ಯದ ಬೇರೆ ಜಿಲ್ಲೆಗಳ ವಿಷಯವನ್ನು ಸಮಾಜದ ರಾಜಕಾರಣಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆಂದು ತಿಳಿಸಿದರು.

ಯಡಿಯೂರಪ್ಪ ಮಾತನಾಡಿ, ಭೋವಿ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಬಹಳ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಮ್ಮ ಆಶೀರ್ವಾದ ಇರಲಿ ಎಂದರು. ಈ ಹಿಂದೆ ಎಂ.ಎಲ್.ಎ.ಗಳು ಆಯ್ಕೆಯಾಗಲು ಸಮುದಾಯದ ಜೊತೆ ಹೆಚ್ಚು ಕೆಲಸ ಮಾಡಿದ್ದೇನೆ. ಮಠ ಸೂಚಿಸಿರುವ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ನಿಮ್ಮ ಜೊತೆ ಇರುತ್ತದೆ ಸಮಾಜದ ಹಿತಕ್ಕೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.

ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮ ಶ್ರೀನಿವಾಸ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್, ಚಿಕ್ಕಜಾಜೂರು ಡಿ.ಸಿ.ಮೋಹನ್, ಹನುಮಂತಪ್ಪ ಕಾಳಘಟ್ಟ, ನಾಗೇಂದ್ರಪ್ಪ ತಾ.ಪಂ. ಸದಸ್ಯರು, ವಡ್ಡರಸಿದ್ದವ್ವನಹಳ್ಳಿ ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.