ಚಿತ್ರದುರ್ಗ: ಚಿತ್ರದುರ್ಗದ ವೀರವನಿತೆ ಒನಕೆ ಒಬವ್ವ ಕ್ರೀಡಾಂಗಣದಲ್ಲಿ ಇದೇ ಮಾರ್ಚ್ 18 ಮತ್ತು 19 ರಂದು ನಡೆಯಲಿರುವ ವಾಯುಪಡೆ ನೇಮಕಾತಿ ರ್ಯಾಲಿಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ದತಾ ಸಭೆ ನಡೆಯಿತು.

ವಾಯುಪಡೆ ಅಧಿಕಾರಿ ಶ್ರೀ ಮಿಶ್ರ ಅವರು ಮಾತನಾಡಿ ಮಾರ್ಚ್ 18 ರಿಂದ 19 ರವರೆಗೆ ರ್ಯಾಲಿ ನಡೆಯುವ ಒನಕೆ ಒಬವ್ವ ಕ್ರೀಡಾಂಗಣದ ಪ್ರದೇಶದಲ್ಲಿ ನೇಮಕಾತಿಗೆ ಬೇಕಾಗುವ ಸಾಧನ ಸಲಕರಣೆ, ಮತ್ತು ಸೌಕರ್ಯಗಳ ಬಗ್ಗೆ ಮಾರ್ಚ್ 15 ರಿಂದ 17 ರವರೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಮಾರ್ಚ್ 18 ರಂದು ಬೆಳಿಗ್ಗೆ 6 ಗಂಟೆಗೆ ನೇಮಕಾತಿ ರ್ಯಾಲಿ ಕಾರ್ಯ ಆರಂಭಗೊಳ್ಳಲಿದೆ ಅದಕ್ಕಾಗಿ ಬೇಕಾಗುವ ಅಂಬ್ಯುಲೆನ್ಸ್ ವಾಹನದ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶಾಮಿಯಾನ, ಶೌಚಾಲಯ, ಧ್ವನಿವರ್ಧಕಗಳನ್ನು ಅಳವಡಿಸುವ ವ್ಯವಸ್ಥೆ ಮಾಡಿಕೊಡಬೇಕೆಂದು ಸೇನಾಧಿಕಾರಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿಯೂ ಸಹ ಈ ನೇಮಕಾತಿ ರ್ಯಾಲಿಯ ಬಗ್ಗೆ ಪ್ರಚಾರ ಮಾಡಲಾಗಿದೆ. ರಾಜ್ಯದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಬರುವ ಅಭ್ಯರ್ಥಿಗಳಿಗೆ ಅವರೇ ಸಂದಾಯ ಮಾಡಿ ಊಟೋಪಚಾರ ಮಾಡಿಕೊಳ್ಳುವಂತಹ ಕ್ಯಾಂಟಿನ್ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ನೇಮಕಾತಿ ರ್ಯಾಲಿ ನಡೆಯುವಾಗ ರಕ್ಷಣೆಗಾಗಿ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಹಾಗೂ ಜೆರಾಕ್ಸ್ ಯಂತ್ರ, ಕನ್ನಡ ಭಾಷೆ ಬಲ್ಲಂತಹ ಸಿಬ್ಬಂದಿಯನ್ನು ನೇಮಿಸುವಂತೆ ಸೇನಾಧಿಕಾರಿ ಮಿಶ್ರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ನಗರಸಭೆಯ ಪೌರಾಯುಕ್ತರಿಗೆ ಮತ್ತು ರಕ್ಷಣಾ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.

ಈ ಕುರಿತು ಇದೇ ಮಾರ್ಚ್ 16 ರಂದು ಬೆಳಿಗ್ಗೆ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಗುತ್ತದೆ ಎಂದು ಸೇನಾಧಿಕಾರಿಗಳು ತಿಳಿಸಿದರು. ನೇಮಕಾತಿ ರ್ಯಾಲಿಯಲ್ಲಿ ದೇಶದ ವಿವಿಧ ಭಾಗಗಳಿಂದ ವಾಯುಪಡೆಯ 75 ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಎನ್ ರವೀಂದ್ರ , ಅಪರ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಅರೆಸಿದ್ದಿ, ಮತ್ತಿತರ ಅಧಿಕಾರಿಗಳು ಹಾಜರಿದ್ದರು