ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಶಿವಕುಮಾರ್ ಮತ್ತು ಅಧಿಕಾರಿ ತಂಡದವರು ಶ್ರೀ ಮುರುಘಾಮಠಕ್ಕೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರೊಂದಿಗೆ ಯೋಜನೆ ಕುರಿತು ಮಾಹಿತಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಯೋಜನೆಯ ಕೆಲಸ ವಿಳಂಬವಾದಷ್ಟು ಹಣದ ಮುಗ್ಗಟ್ಟು ಜಾಸ್ತಿಯಾಗುತ್ತದೆ. ಶಾಶ್ವತ ಬರಗಾಲದಿಂದ ತತ್ತರಿಸಿರುವ ಚಿತ್ರದುರ್ಗಕ್ಕೆ ಆದಷ್ಟು ಬೇಗನೆ ನೀರನ್ನು ಹರಿಸಬೇಕು. ಇದರೊಂದಿಗೆ ಈ ಭಾಗದ ಜನರ ನೀರಿನ ದಾಹವನ್ನು ತಣಿಸಬೇಕು. ಇನ್ನು ಮುಂದೆ ಎಂದೂ ಜಲಕ್ಷಾಮ ಬಾರದಂತೆ ನೋಡಿಕೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸುವ ಮೊದಲು ಕೆರೆಗಳ ಹೂಳನ್ನು ತೆಗೆಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳನ್ನೊಳಗೊಂಡಂತೆ ಎಲ್ಲರ ಸಹಕಾರದಿಂದ ಮಾಡಬೇಕು. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಮತ್ತು ಶ್ರೀಮಠವು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯ ಇಂಜಿನಿಯರ್ ಶಿವಕುಮಾರ್, ಎರಡು ಹಂತದಲ್ಲಿ ನೀರನ್ನು ತರುವ ಕೆಲಸ ಭರದಿಂದ ಸಾಗಿದೆ. ಮೊದಲ ಹಂತದಲ್ಲಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರನ್ನು ಲಿಫ್ಟ್ ಮಾಡುವುದು. ಈ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ. ಎರಡನೆಯ ಹಂತದಲ್ಲಿ ಭದ್ರಾದಿಂದ ನೀರನ್ನು ಲಿಫ್ಟ್ ಮಾಡುವುದು. ಮೊದಲು ವಿವಿ ಸಾಗರಕ್ಕೆ 2 ಟಿಎಂಸಿ ನೀರನ್ನು ಹರಿಸುವುದು ಹಾಗೂ ಹೊಳಲ್ಕೆರೆಗೆ ನೀರನ್ನು ತರುವುದು. ಭದ್ರಾ ಜಲಾಶಯದಿಂದ ಅಜ್ಜಂಪುರ ಟನಲ್‍ನಿಂದ ಚಿತ್ರದುರ್ಗಕ್ಕೆ ನೀರನ್ನು 2018ರ ಡಿಸೆಂಬರ್ ವೇಳೆಗೆ ಪ್ರಾಯೋಗಿಕವಾಗಿ ಹರಿಸುತ್ತೇವೆ. ನಂತರ 2019ರ ಜೂನ್ ವೇಳೆಗೆ ಸಂಪೂರ್ಣವಾಗಿ ನೀರನ್ನು ಹಾಯಿಸುವ ಯೋಜನೆ ಭರದಿಂದ ಸಾಗಿದೆ. ಟನಲ್‍ನಲ್ಲಿ ಮಣ್ಣು ಬೀಳುತ್ತಿರುವುದರಿಂದ ಅದಕ್ಕೆ ಕಾಂಕ್ರಿmõï ರಿಂಗ್ ಅಳವಡಿಸಲಾಗುತ್ತದೆ. ಆದ ಕಾರಣ ಕೆಲಸ ಸ್ವಲ್ಪ ವಿಳಂಬವಾಗುತ್ತಿದೆ. ಚಿತ್ರದುರ್ಗದ 159 ಕೆರೆಗಳಿಗೆ ಹಾಗು ಈ ಪ್ರಾಜೆಕ್ಟ್‍ನಿಂದ ಒಟ್ಟು 369 ಕೆರೆಗಳಿಗೆ ನೀರನ್ನು ಹರಿಸಲಾಗುತ್ತದೆ. 10.86 ಟಿಎಂಸಿ ನೀರು ಕೆರೆಗಳಿಗೆ ಮತ್ತು 19 ಟಿಎಂಸಿ ನೀರು ನೀರಾವರಿಗೆಂದು ಹಂಚಿಕೆ ಮಾಡಲಾಗಿದೆ. ನಮ್ಮ ಪ್ರಾಜೆಕ್ಟ್‍ನ ನೀರಿನ ಒಟ್ಟು ಸಂಗ್ರಹ 29.9 ಟಿಎಂಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್.ಎಸ್.ಪಾಳೇಗಾರ, ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‍ಕುಮಾರ್, ದಾವಣಗೆರೆ ಏತ ನೀರಾವರಿ ಹೋರಾಟಗಾರರಾದ ಡಾ ಮಂಜುನಾಥಗೌಡ, ಹೆಚ್.ಕೆ. ಬಸವರಾಜು, ಎನ್. ಹನುಮಂತಪ್ಪ ಮೊದಲಾದವರಿದ್ದರು.