ಚಿತ್ರದುರ್ಗ : ಬೆದರಿಕೆಯ ಸಂದರ್ಭ ಇಂದು ಜಗತ್ತನ್ನು ಆಳುತ್ತಿದೆ. ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಕೌಟುಂಬಿಕ ಮತ್ತು ವೈಯುಕ್ತಿಕ ಬೆದರಿಕೆಗಳಿಂದ ಬ್ಲಾಕ್‌ಮೇಲ್ ಮಾಡಲಾಗುತ್ತದೆ. ಆದರೆ ಕಾಯಕ ಪ್ರಧಾನವಾದ ಸಮಾಜದಲ್ಲಿ ಕಾಯಕ ಮಾಡುತ್ತ ಬದುಕು ನಡೆಸಿದರೆ ಅಂಥವರಿಗೆ ಯಾರೂ ಬೆದರಿಕೆ ಹಾಕುವುದಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೆಂಟನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಇದು ಚುನಾವಣೆ ಕಾಲ. ಮತ ಅಮೂಲ್ಯವಾದುದು. ಇದನ್ನು ಯಾರೂ ಮಾರಿಕೊಳ್ಳಬಾರದು. ಯಾರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತಿದ್ದಾರೋ, ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೋ ಅಂಥವರನ್ನು ಗುರುತಿಸಿ ತಪ್ಪದೇ ಮತದಾನದಲ್ಲಿ ಭಾಗವಹಿಸಿ ಮತ ಹಾಕಬೇಕು ಎಂದು ಕಿವಿಮಾತು ಹೇಳಿದರು.

ವಾಲ್ಮೀಕಿ ಗುರುಪೀಠದ ಗೋಲಪಲ್ಲಿ ಶಾಖಾಮಠದ ಶ್ರೀ ವರದಾನೇಶ್ವರ ಸ್ವಾಮಿಗಳು ಮಾತನಾಡಿ, ನಾಡು ದೇಶದ ಅಭಿವೃದ್ಧಿಗೆ ಶ್ರೀಗಳು ಬಹಳಷ್ಟು ಮಠಗಳನ್ನು ಕಟ್ಟಿಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಕೆಲಸದಲ್ಲಿ ಸದಾ ಸಕ್ರಿಯರಾಗಿದ್ದಾರೆ. ನಿರಂತರವಾದ ಇಂತಹ ಕಾರ್ಯಕ್ರಮಗಳು ಅಪರೂಪ. ನಮಗೆ ಒಂದು ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುವುದೇ ಸಾಕಾಗಿ ಹೋಗುತ್ತದೆ. ಆದರೆ ಶ್ರೀಗಳು ಇಂತಹ ಕಾರ್ಯಕ್ರಮಗಳನ್ನು ಪ್ರತಿತಿಂಗಳು ನಡೆಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಮುಖ್ಯಅತಿಥಿ ಷಡಕ್ಷರಿ ಮಾತನಾಡಿ, ಶ್ರೀಗಳು ಉತ್ತಮ ಕೆಲಸಗಳನ್ನು ನಾಡಿನಾದ್ಯಂತ ಮಾಡುತ್ತಿದ್ದಾರೆ. ತಮ್ಮ ಬದುಕನ್ನು ಸಮಾಜಕ್ಕೆ ಮುಡುಪಾಗಿಟ್ಟಿದ್ದಾರೆ. ಶ್ರೀಗಳವರ ಕಾರ್‍ಯ ಸ್ತುತ್ಯಾರ್ಹವಾದುದು. ಅವರ ಜೊತೆ ನಾವೂ ಸಹ ಭಾಗಿಯಾಗಿ ಕೈಜೋಡಿಸೋಣ ಎಂದರು.

ವೇದಿಕೆಯಲ್ಲಿ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ನಿಪ್ಪಾಣಿ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ತಿಪ್ಪೇರುದ್ರಸ್ವಾಮಿಗಳು, ಶ್ರೀ ಪೂರ್ಣಾನಂದ ಸ್ವಾಮಿಗಳು, ಶ್ರೀ ಕುಂಬಾರ ಗುಂಡಯ್ಯ ಸ್ವಾಮಿಗಳು,
ಶ್ರೀ ಬಸವ ಪ್ರಜ್ಞಾನಂದ ಸ್ವಾಮಿಗಳು, ಶ್ರೀ ಬಸವ ಕಿರಣ ಸ್ವಾಮಿಗಳು, ಶರಣೆ ಮುಕ್ತಾಯಕ್ಕ, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ೩೯ ಜೋಡಿಗಳು ದಾಂಪತ್ಯಜೀವನಕ್ಕೆ ಕಾಲಿಟ್ಟರು.

ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ನಾಗರಾಜ ಸಂಗಮ್ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ನಿರೂಪಿಸಿದರು. ಪ್ರೊ.ಸಿ.ವಿ. ಸಾಲಿಮಠ ವಂದಿಸಿದರು.