ನವದೆಹಲಿ : ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, `ಪ್ರಧಾನಮಂತ್ರಿ ಸ್ವನಿಧಿ’ ಎಂಬ ಯೋಜನೆಯಡಿ ದೇಶಾದ್ಯಂತ ಬೀದಿ ಬದಿಯ ವ್ಯಾಪಾರಿಗಳಿಗೆ ಬ್ಯಾಂಕುಗಳಿಂದ 10 ಸಾವಿರ ರೂ. ಸಾಲ ನೀಡಲು ಮುಂದಾಗಿದೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರಕ್ಕೆ ಬೇಕಾದ ಆರಂಭಿಕ ಬಂಡವಾಳ ಒದಗಿಸಲು ಸ್ವನಿಧಿ ಯೋಜನೆ ಆರಂಭಿಸಲಾಗಿದೆ. 10,000 ರೂ. ಸಾಲ ಮರುಪಾವತಿ ಮಾಡಲು ಅವರಿಗೆ ವಿವಿಧ ಕಂತುಗಳಲ್ಲಿ 1 ವರ್ಷದ ಕಾಲಾವಕಾಶ ದೊರೆಯಲಿದೆ.

ಇನ್ನು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ಶೇ. 7 ರಷ್ಟು ಬಡ್ಡಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗೆ ಆರು ತಿಂಗಳಿಗೊಮ್ಮೆ ಪಾವತಿಸಲಿದೆ.