ಬೆಂಗಳೂರು – ನಿಗದಿತ ಅವಧಿಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಂತಿಮ ತೀರ್ಪನ್ನು ನ.19ಕ್ಕೆ ಕಾಯ್ದಿರಿಸಿದೆ. ಬಿಬಿಎಂಪಿಗೆ ಸಕಾಲಕ್ಕೆ ಚುನಾವಣೆ ನಡೆಸಬೇಕೆಂದು ಕೋರಿ ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜ್, ಅಬ್ದುಲ್ ವಾಜೀದ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವಿಭಾಗೀಯ ಪೀಠ ತೀರ್ಪನ್ನು ನ.19ಕ್ಕೆ ಕಾಯ್ದಿರಿಸಿದ್ದು ಬಿಬಿಎಂಪಿ ಚುನಾವಣೆ ಭವಿಷ್ಯ ಅಂದು ನಿರ್ಧಾರವಾಗಲಿದೆ.

ಬಿಬಿಎಂಪಿ ವಾರ್ಡ್‍ಗಳನ್ನು 250ಕ್ಕೆ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮಸೂದೆ ಜಾರಿ ಮಾಡಲಾಗಿದೆ. ಪರಿಷ್ಕರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಾಲಾವಧಿ ಬೇಕಾಗುತ್ತದೆ. ಹಾಗಾಗಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸಮಯಾವಕಾಶ ಕೋರಿ ಸರ್ಕಾರ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿತ್ತು.

ಈಗಾಗಲೇ ವಾರ್ಡ್ ಪುನರ್ ವಿಂಗಡಣೆ ಮಾಡಿ ಮೀಸಲಾತಿ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು ಅದರಂತೆ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಂತದಲ್ಲಿ ಚುನಾವಣೆ ಮುಂದೂಡಿದರೆ ಆಯೋಗದ ಎಲ್ಲ ಪ್ರಯತ್ನ ವ್ಯರ್ಥವಾದಂತಾಗುತ್ತದೆ. ನಿಗದಿಯಂತೆ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಯೋಗದ ಪರ ವಕೀಲರು ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸಿದ್ದರು.

ಅನಗತ್ಯವಾಗಿ ಚುನಾವಣೆಯನ್ನು ಮುಂದೂಡಲು ಸರ್ಕಾರ ವಾರ್ಡ್‍ಗಳನ್ನು ಹೆಚ್ಚಳ ಮಾಡುವ ತಂತ್ರ ಮಾಡುತ್ತಿದೆ. ನಿಗದಿತ ಅವಧಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಬಿಬಿಎಂಪಿ ಮಾಜಿ ಸದಸ್ಯರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಸರ್ಕಾರ ಕೈಗೊಂಡಿರುವ ಕ್ರಮಗಳ ಪ್ರಮಾಣಿಕೃತ ದಾಖಲೆ ಸಲ್ಲಿಸಲು ನ್ಯಾಯಾಲಯ ಸೂಚಿಸಿತ್ತು. ಅದರಂತೆ ಸರ್ಕಾರ ವರದಿ ಸಲ್ಲಿಸಿದ್ದು ವಾದ ವಿವಾದ ಆಲಿಸಿರುವ ನ್ಯಾಯಾಲಯ ತೀರ್ಪನ್ನು ನ.19ಕ್ಕೆ ಕಾಯ್ದಿರಿಸಿದೆ. ಬಿಬಿಎಂಪಿಗೆ ಚುನಾವಣೆ ನಡೆಯುವುದೋ; ಇಲ್ಲವೋ ಎಂಬುದರ ಬಗ್ಗೆ 19ರಂದು ನಿರ್ಧಾರವಾಗಲಿದೆ.