ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭೋವಿ ಸಮಾಜಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಮುಂದಿನ ಪರಿಣಾಮವನ್ನು ಬಿಜೆಪಿ. ಎದುರಿಸಬೇಕಾಗುತ್ತದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಸಿದರು.

ಭೋವಿ ಹಾಸ್ಟೆಲ್‍ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಕಳೆದ ತಿಂಗಳು ಚಿತ್ರದುರ್ಗದಲ್ಲಿ ನಡೆದ ಸಾಮಾಜಿಕ ನ್ಯಾಯಕ್ಕಾಗಿ ಭೋವಿ ಸಮಾವೇಶದಲ್ಲಿ ಚಿತ್ರದುರ್ಗ, ಕೋಲಾರ ಲೋಕಸಭಾ ಕ್ಷೇತ್ರದಿಂದ ಭೋವಿ ಸಮಾಜದವರಿಗೆ ಸ್ಪರ್ಧಿಸಲು ಟಿಕೇಟ್ ಕೊಡಲೇಬೇಕು ಎಂದು ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಆಗ್ರಹಿಸಿದಾಗ ವರಿಷ್ಟರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಕಾರಾತ್ಮಕ ಭರವಸೆ ನೀಡಿದ್ದರು. ಆದರೆ ಇದುವರೆವಿಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಭೋವಿ ಜನಾಂಗಕ್ಕೆ ಟಿಕೇಟ್ ನೀಡುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅದಕ್ಕಾಗಿ ಇನ್ನು ಎರಡು ಮೂರು ದಿನಗಳಲ್ಲಿ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಇಲ್ಲವೇ ಸಭೆ ನಡೆಸಿ ಬಿಜೆಪಿ.ವಿರುದ್ದ ಮತಚಲಾಯಿಸುವುದೋ ಇಲ್ಲ ನೋಟಕ್ಕೆ ಮತ ನೀಡುವುದೋ ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಭೋವಿ ಸಮಾಜಕ್ಕೆ ರಾಜಕೀಯವಾಗಿ ಕೊಡುವ ಶಕ್ತಿ ಇತರೆ 99 ಜಾತಿಗಳಿಗೆ ಶಕ್ತಿ ನೀಡಿದಂತಾಗುತ್ತದೆ. ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸುವವರು ಬಿಜೆಪಿ.ಮುಖಂಡರುಗಳ ಸಂಪರ್ಕದಲ್ಲಿದ್ದಾರೆ. ಭೋವಿ ಸಮಾಜಕ್ಕೆ ಎರಡು ಕ್ಷೇತ್ರಗಳಲ್ಲಿ ಒಂದು ಕಡೆ ನೀಡುತ್ತಾರೆಂಬ ಭರವಸೆ ಇಲ್ಲಿಯವರೆಗೂ ಇತ್ತು. ಈಗ ಅನೇಕಲ್ ನಾರಾಯಣಸ್ವಾಮಿ ಹೆಸರು ಚಿತ್ರದುರ್ಗ ಕ್ಷೇತ್ರಕ್ಕೆ ಬಲವಾಗಿ ಕೇಳಿಬರುತ್ತಿದೆ. ಸದಾಶಿವ ಆಯೋಗದ ವರದಿಗೆ ದಿಟ್ಟ ಉತ್ತರ ಕೊಡಲು ನಮ್ಮ ಸಮಾಜದ ಇಬ್ಬರು ಸಂಸದರು ಬೇಕು. ಸದಾಶಿವ ಆಯೋಗದ ವರದಿ ಸೋರಿಕೆಯಲ್ಲಿ ಎ.ನಾರಾಯಣಸ್ವಾಮಿ ಕೈವಾಡ ಇದೆ ಎನ್ನುವ ಕಾರಣಕ್ಕಾಗಿ ಅನೇಕಲ್‍ನಲ್ಲಿ ಭೋವಿ ಸಮಾಜ ನಾರಾಯಣಸ್ವಾಮಿಗೆ ಬಹಿಷ್ಕರಿಸಿದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವ್ಯಕ್ತಿ ಹಾಗೂ ಬಿಜೆಪಿ.ವಿರುದ್ದ ಮತ ಚಲಾಯಿಸುತ್ತೇವೆ. ಎಲ್ಲಾ ಸಮುದಾಯಕ್ಕೂ ಅವಕಾಶ ಮಾಡಿಕೊಡಿ. ನಮ್ಮ ಸಮುದಾಯವನ್ನು ನಿರ್ಲಕ್ಷಿಸುವವರನ್ನು ನಾವು ನಿರ್ಲಕ್ಷಿಸುತ್ತೇವೆ. ನಮಗೆ ಪಕ್ಷದ ಕಾರ್ಯಕರ್ತರ ಅವಶ್ಯಕತೆಯಿಲ್ಲ. ಭೋವಿ ಸಮಾಜದವರು ಸದೃಢರಾಗಿದ್ದಾರೆ. ಈ ಚುನಾವಣೆಯಲ್ಲಿ ಭೋವಿ ಸಮಾಜ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಬಿಜೆಪಿ.ನಾಯಕರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭೋವಿ ಸಮುದಾಯದಿಂದ ಸ್ಪರ್ಧಾಳುಗಳು ಸಿದ್ದರಾಗಿದ್ದಾರೆ. ರಾಷ್ಟ್ರೀಯ ಸಂಘಟನೆ, ರಾಜ್ಯ ಯುವ ಸಂಘಟನೆ ಹಾಗೂ ಭೋವಿ ಸಮಾಜದ ಮುಖಂಡರುಗಳ ಸಮಾವೇಶ ಇಲ್ಲವೆ ಸಭೆ ಕರೆದು ಬಿಜೆಪಿ.ಗೆ ತಕ್ಕ ಪಾಠ ಕಲಿಸುವ ತೀರ್ಮಾನ ಕೈಗೊಳ್ಳುವುದಾಗಿ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ಹೇಳಿದರು.