ಚಿತ್ರದುರ್ಗ: ಕೋಮುವಾದಿ ಬಿಜೆಪಿ.ಯನ್ನು ರಾಜ್ಯದಲ್ಲಿ ಬೇರು ಸಮೇತ ಕಿತ್ತು ಹಾಕುವುದಕ್ಕಾಗಿ ಜೆಡಿಎಸ್.ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನಗಳಲ್ಲಿಯೂ ಗೆಲುವು ನಮ್ಮದೆ ಎನ್ನುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರು ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಒನಕೆ ಓಬವ್ವ ವತ್ತದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ.ಗೆ ಲಗತ್ತಾದ ಅಭ್ಯರ್ಥಿ ಸಿಕ್ಕಿಲ್ಲ. ಅನೇಕಲ್‍ನಲ್ಲಿ ಎರಡು ಬಾರಿ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸೋತಿರುವ ನಾರಾಯಣಸ್ವಾಮಿಯನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ಆಗ ಬಿ.ಎನ್.ಚಂದ್ರಪ್ಪ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಮಾಡಿಕೊಂಡಿರುವುದರಿಂದ ಈ ಚುನಾವಣೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಎರಡು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರುಗಳ ಮೇಲಿದೆ ಎಂದು ಮನವಿ ಮಾಡಿದರು.

ಸರಳ, ಸಜ್ಜನಿಕೆ, ಸಂಭಾವಿತ, ಜನಪರ ಕಾಳಜಿಯುಳ್ಳ ಚಂದ್ರಪ್ಪನನ್ನು ಎರಡು ಪಕ್ಷಗಳ ಹುರಿಯಾಳಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಿದ್ದೇವೆ. ದೇಶದ ಪ್ರಧಾನಿ ನರೇಂದ್ರಮೋದಿ ಎಷ್ಟೆ ಸುಳ್ಳು ಅಪಪ್ರಚಾರ ಮಾಡಿಕೊಂಡು ತಿರುಗಲಿ ಈ ಚುನಾವಣೆಯಲ್ಲಿ ಯು.ಪಿ.ಎ.ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್‍ಗಾಂಧಿ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ 21 ಕಡೆ ಕಾಂಗ್ರೆಸ್ ಸ್ಪರ್ಧಿಸಿದೆ. ಏಳು ಕಡೆ ಜೆಡಿಎಸ್.ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ನಮಗೆ ಬಿಜೆಪಿ.ನೇರ ಪ್ರತಿಸ್ಪರ್ಧಿಯಾಗಿರುವುದರಿಂದ 28 ಕ್ಕೆ 28 ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೆ ಎನ್ನುವುದರಲ್ಲಿ ಅನುಮಾನ ಬೇಡ. ಮೋದಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸಿ ಕನಸು ಬಿತ್ತಿ ಸುಳ್ಳು ಭರವಸೆಗಳನ್ನು ಕೊಟ್ಟಿರುವುದನ್ನು ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಬಾಯಿ ಬಡಾಯಿ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ದೇಶದಲ್ಲಿ ಇದುವರೆವಿಗೂ ನೋಡಿಲ್ಲ. ಜನದ್ರೋಹಿ, ವಚನ ಭ್ರಷ್ಟ, ಯಾವ ಪುರುಷಾರ್ಥಕ್ಕಾಗಿ ಮೋದಿಗೆ ಮತ ಹಾಕುತ್ತೀರ ಎಂದು ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಮಂತ್ರಿ ವೆಂಕಟರಮಣಪ್ಪ, ಮಾಜಿ ಸಚಿವರುಗಳಾದ ಹೆಚ್.ಆಂಜನೇಯ, ಟಿ.ಬಿ.ಜಯಚಂದ್ರ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಶಾಸಕ ರಘುಮೂರ್ತಿ, ಮಾಜಿ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ತಿಪ್ಪೇಸ್ವಾಮಿ, ಡಿ.ಸುಧಾಕರ್, ಎ.ವಿ.ಉಮಾಪತಿ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಕೆ.ಪಿ.ಸಿ.ಸಿ.ಕಾರ್ಯದರ್ಶಿಗಳಾದ ಎಂ.ಜಯಣ್ಣ, ಹನುಮಲಿ ಷಣ್ಮುಖಪ್ಪ, ಸಾ.ಲಿಂಗಯ್ಯ, ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತ್ಯರಾಜನ್, ಆರ್.ಮಂಜುನಾಥ್, ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜು, ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ಎರಡು ಪಕ್ಷಗಳ ಮುಖಂಡರುಗಳು ವೇದಿಕೆಯಲ್ಲಿದ್ದರು.