ಬೆಂಗಳೂರು: ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿ ರಾಜ್ಯದಲ್ಲಿ ಸರ್ಕಾರ ರಚಿಸುವ ಹಗಲು ಕನಸು ಕಾಣುತ್ತಿದ್ದಾರೆ. ನಾನು ಜೈಲಿಗೆ ಹೋದರೂ ಅವರಿಗೆ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಎಂದು ಹೇಳಿದ್ದಾರೆ.

ಆಸ್ಪತ್ರೆಯಿಂದಲೇ ನೇರವಾಗಿ ಬಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ಆರೋಪದ ಮಾಡಿದ ಬೆನ್ನಲ್ಲೇ ಡಿಕೆಶಿ ತಿರುಗೇಟು ನೀಡಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದನ್ನು ಬಿಜೆಪಿ ಒಪ್ಪಿಕೊಂಡಂತಾಗಿದೆ ಎಂದರು. ಅಲ್ಲದೆ, ನಾನು ಪಕ್ಷ ಹಾಗೂ ಯಾವುದೇ ನಾಯಕರಿಗೆ ಹಣ ನೀಡಿಲ್ಲ. ಬಿಜೆಪಿಯವರು ರಾಹುಲ್‌ ಗಾಂಧಿ ಅವರಿಂದ ಉತ್ತರ ಬಯಸುತ್ತಿದ್ದಾರೆ. ಅವರಿಗೆ ಉತ್ತರಿಸಲು ನಾನೊಬ್ಬನೇ ಸಾಕು. ಈ ಬಗ್ಗೆ ನಾನು ದೆಹಲಿಯಲ್ಲಿಯೂ ಪತ್ರಿಕಾಗೋಷ್ಠಿ ನಡೆಸಿ ಉತ್ತರಿಸುತ್ತೇನೆ ಎಂದರು.

ಜಾರಿ ನಿರ್ದೇಶನಾಲಯದಿಂದ ನನಗೆ ಇದುವರೆಗೂ ಯಾವುದೇ ನೊಟೀಸ್‌ ಬಂದಿಲ್ಲ. ನನಗೆ ನೊಟೀಸ್‌ ಬಂದರೆ ಸೂಕ್ತ ಉತ್ತರ ಕೊಡುತ್ತೇನೆ. ಅವರು ನನ್ನ ರಕ್ತ ಕೇಳಿದರೂ ಕೊಡುತ್ತೇನೆ. ಬಿಜೆಪಿ ನಾಯಕರು ಅನಗತ್ಯವಾಗಿ ನನ್ನ ಪಕ್ಷ ಹಾಗೂ ರಾಷ್ಟ್ರೀಯ ನಾಯಕರನ್ನು ಎಳೆದು ತರುತ್ತಿದ್ದಾರೆ ಸರಿ ಅಲ್ಲ ಎಂದು ಹೇಳಿದ್ರು.