ಚಿತ್ರದುರ್ಗ: ಹನ್ನೆರಡನೆ ಶತಮಾನದ ಬಸವಣ್ಣನವರ ತತ್ವಗಳನ್ನು ಬಾಯಲ್ಲಿ ಹೇಳುವುದು ಸುಲಭ. ಅದರಂತೆ ಜೀವನದಲ್ಲಿ ನಡೆಯುವುದು ಕಷ್ಟವಿದೆ. ಅವರ ವಿಚಾರ ಧಾರೆಗಳ ಮೇಲೆ ಎಲ್ಲವೂ ಸಾಗಿದರೆ ಎಲ್ಲಯೂ ಬಡತನ ನಿರುದ್ಯೋಗ ಇರುವುದೇ ಇಲ್ಲ ಎಂದು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ವೀರಶೈವ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ವಚನ ಕಮ್ಮಟ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎ.ಐ.ಸಿ.ಸಿ.ಅಧ್ಯಕ್ಷ ಯುವ ನೇತಾರ ರಾಹುಲ್‍ಗಾಂಧಿ ನನ್ನ ಮೇಲೆ ಅಪಾರವಾದ ವಿಶ್ವಾಸ ನಂಬಿಕೆಯಿಟ್ಟು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷನಾಗಿ ನೇಮಿಸಿದ್ದಾರೆ. ರಾಜ್ಯಾದ್ಯಂತ ಸುತ್ತಾಡಿ ಪಕ್ಷವನ್ನು ಬೇರುಮಟ್ಟದಲ್ಲಿ ಗಟ್ಟಿಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಬಸವಣ್ಣನವರ ವಿಚಾರಧಾರೆಯ ಮೇಲೆ ಎಲ್ಲಾ ಜಾತಿಯವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
1904 ರಲ್ಲಿ ಹಾನಗಲ್ ಕುಮಾರೇಶ್ವರರು ಹರಿದು ಹಂಚಿಹೋಗಿದ್ದ ನಮ್ಮ ಸಮಾಜವನ್ನು ಒಂದುಗೂಡಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಹುಟ್ಟುಹಾಕಿದರು. ಅಖಿಲ ಭಾರತ ವೀರಶೈವ ಮಹಾಸಭೆಗೆ ತನ್ನದೇ ಆದ ಪರಂಪರೆಯಿದೆ. ಮೇಲು-ಕೀಳು, ಅಸ್ಪøಶ್ಯತೆ, ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಎಲ್ಲಾ ಜಾತಿಗಳು ಒಂದುಗೂಡಬೇಕು ಎಂದರು.
ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಬಸವಣ್ಣನವರ ವಚನದಲ್ಲಿ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಹಣ, ಆಸ್ತಿ, ಸ್ವಾರ್ಥಕ್ಕಾಗಿ ಮಾನವೀಯ ಮೌಲ್ಯಗಳೇ ಅಧಃಪತನಕ್ಕೆ ಹೋಗಿದೆ. ಮಹಿಳೆ ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ. ವಾಟ್ಸ್‍ಪ್, ಸಾಮಾಜಿಕ ಜಾಲತಾಣಗಳ ತಪ್ಪು ಸಂದೇಶಗಳಿಂದ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಅರಾಜಕತೆ ಅಸಹಿಷ್ಣುತೆ ಜಾಸ್ತಿಯಾಗುತ್ತಿದೆ. ಶಾಂತಿಯುತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ತತ್ವ ಪ್ರಸ್ತುತ ಎಂದು ಹೇಳಿದರು.
ಸಂಸದ ಬಿ.ಎನ್.ಚಂದ್ರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ಕುಮಾರಸ್ವಾಮಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎನ್.ಮಂಜುನಾಥ್‍ಗೊಪ್ಪೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ರುದ್ರಣ್ಣ, ರೇಣುಕಪ್ರಸನ್ನ, ರುದ್ರಣ್ಣ, ವೀಣ, ಮಹಡಿಶಿವಮೂರ್ತಿ ವೇದಿಕೆಯಲ್ಲಿದ್ದರು.
ಕುಸುಮ ಮಲ್ಲೇಶ್ ಪ್ರಾರ್ಥಿಸಿದರು. ಮಹೇಶ್ವರಪ್ಪ ಸ್ವಾಗತಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿಜಯ ನಿರೂಪಿಸಿದರು.
ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗರಾಜ್ ಸಂಗಂರವರು ಈಶ್ವರಖಂಡ್ರೆಯವರನ್ನು ಸನ್ಮಾನಿಸಿದರು.