ಸಿರಿಗರೆ: ಕರ್ನಾಟಕದ ಅನೇಕ ಪ್ರದೇಶಗಳು ಪದೇ ಪದೇ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಇದೆ. ಮನುಷ್ಯರು ಹೇಗಾದರೂ ಬದುಕಿಕೊಳ್ಳುತ್ತಾರೆ. ಆದರೆ ದನಕರುಗಳು ಮೇವು ನೀರಿಲ್ಲದೆ ಕಂಗಾಲಾಗುತ್ತವೆ. ಚಾಮರಾಜ ನಗರದ ಬಳಿ ಮೇವು ನೀರಿಲ್ಲದೆ ಎಲ್ಲೆಂದರಲ್ಲಿ ದನಕರುಗಳು ಸತ್ತಿರುವ ವರದಿಗಳು ದುಃಖದಾಯಕವಾಗಿವೆ.

ಈ ಹಿನ್ನೆಲೆಯಲ್ಲಿ ಸಿರಿಗೆರೆ ಸಮೀಪ ಇರುವ ಶಿವಕುಮಾರ ವನದ1000 ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್ ಗೋಶಾಲೆಯನ್ನು ಆರಂಭಿಸುವ ಯೋಜನೆಯನ್ನು ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.

ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಅವರು ಇದೊಂದು ಖಾಯಂ ವ್ಯವಸ್ಥೆಯಾಗಿದ್ದು, ಈ ಕಾರ್ಯಕ್ಕಾಗಿ ೨ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಈ ಕಾಡಿನಲ್ಲಿ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡಿ ಜಾನುವಾರುಗಳಿಗೆ ನೀರನ್ನು ಒದಗಿಸಲಾಗುವುದಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೇವನ್ನು ಬೆಳೆಸಲಾಗುವುದು. ನೀರನ್ನು ಪಂಪ್ ಮಾಡಲು ಸೋಲಾರ್ ವಿದ್ಯತ್ ಉತ್ಪಾದನೆಯ ಬಗ್ಗೆಯೂ ಚಿಂತಿಸಲಾಗುತ್ತಿದೆ. ಕಾಡಿನಲ್ಲಿರುವ ಮೃಗಗಳಿಂದ ಜಾನುವಾರುಗಳಿಗೆ ತೊಂದರೆ ಆಗದಂತೆ  ಬೇಲಿಯನ್ನು ನಿರ್ಮಿಸಲಾಗುವುದು. ರಾಜ್ಯದ ಯಾವುದೇ ಭಾಗದ ರೈತರೂ ಇದರ ಪ್ರಯೋಜನ ಪಡೆಯಬಹುದು. ರೈತರು ಬಯಸಿದರೆ ಜಾನುವಾರುಗಳನ್ನು ಗೋಶಾಲೆಗೆ ತರಲು ಮಠದಿಂದ ಲಾರಿಯನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಬರ ಪ್ರದೇಶದ ರೈತರು ಇಲ್ಲಿಗೆ ದನಕರುಗಳನ್ನು ತಂದು ಮಳೆಗಾಲ ಬರುವ ತನಕ ಮೇವು ಮತ್ತು ನೀರನ್ನು ಪಡೆದು ಸಾಕಬಹುದು. ರಾಸುಗಳೊಂದಿಗೆ ಬರುವ ರೈತರಿಗೂ ಮಠದಿಂದ ಆಹಾರ ಮತ್ತು ವಸತಿಯನ್ನು ನೀಡಲಾಗುವುದು.

ತಮ್ಮ ಭಾಗದಲ್ಲಿ ಮಳೆ ಆರಂಭವಾಗಿ ಮೇವು ನೀರು ದೊರೆಯುವವರೆಗೂ ರೈತರು ಶಿವಕುಮಾರ ವನದಲ್ಲಿ ತನ್ನ ರಾಸುಗಳನ್ನು ಸಾಕಿಕೊಂಡು ಹೋಗಲು ಅನುವು ಮಾಡಿಕೊಡುವುದಾಗಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿದ್ದಾರೆ.