ಜಗಳೂರು: ಬದುಕಿನಲ್ಲಿ ವಿನೋದ ಪ್ರಸಂಗಗಳು ಸಹಜವಾಗಿಯೇ ಘಟಿಸುತ್ತವೆ. ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆನಂದಿಸುವ ಗುಣ ನಮ್ಮದಾಗಬೇಕು. ನಮ್ಮ ವಿದ್ಯಾರ್ಥಿ ಜೀವನದಲ್ಲಿಯೂ ಇಂಥ ಅನೇಕ ಪ್ರಸಂಗಗಳು ಘಟಿಸಿವೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ನಾವು ಇಲ್ಲಿ ಕುಳಿತೇ ಶರಣರ ವಚನಗಳಲ್ಲಿ ಹಾಸ್ಯದ ಪ್ರಸ್ತಾಪವಾಗಿಯೇ ಎನ್ನುವುದನ್ನು ಗಮನಿಸಿದಾಗ ಬಸವಣ್ಣನವರ ‘ಹಾವಾಡಿಗನೂ ಮೂಕೊರತಿಯೂ…’, ‘ಕಿಚ್ಚು ದೈವವೆಂದು ಹವಿಯನಿಕ್ಕುವ…’ ‘ತನ್ನ ಕೆರಹಿನ ಧ್ಯಾನವಲ್ಲದೆ…’ ‘ಉಂಬಾಗ ಇಲ್ಲ, ಉಡುವಾಗ ಇಲ್ಲ…’ ಮುಂತಾದ ವಚನಗಳಲ್ಲಿ ಹಾಸ್ಯದೊಂದಿಗೆ ವಿಡಂಬನೆಯೂ ಇರುವುದನ್ನು ಗಮನಿಸಿದರೆ ಬಸವಣ್ಣನವರಿಗೂ ಹಾಸ್ಯಪ್ರಜ್ಞೆ ಇತ್ತೆಂದು ತೋರುತ್ತದೆ ಎಂದರು.

ಅಮೇರಿಕಾದ ಮಕ್ಕಳು ಪ್ರಶ್ನೆ ಕೇಳುವುದನ್ನು ಅಲ್ಲಿನ ಪೋಷಕರು ಪ್ರೋತ್ಸಾಹಿಸುತ್ತಾರೆ. ಅದರಂತೆ ನಮ್ಮ ಮಕ್ಕಳಿಗೂ ಪ್ರಶ್ನೆಗಳನ್ನು ಕೇಳುವ ಮನೋಭಾವವನ್ನು ಪ್ರೋತ್ಸಾಹಿಸಬೇಕು. ದೇವರನ್ನು ನೋಡಲು ನಮಗೆ ಸಿಕ್ಕಿರುವ ಇಷ್ಟ ಲಿಂಗ ಬೈನಾಕ್ಯುಲರ್ ಇದ್ದಂತೆ. ಕನ್ನಡ ಭಾಷೆ ಅದ್ಭುತವಾದ ಭಾಷೆ. ಅದೀಗ ಕುಲಗೆಡುತ್ತಿದೆ. ನಮ್ಮ ಮಕ್ಕಳು ಇಂಗ್ಲೀಷ್ ಭಾಷೆಯನ್ನು ಒಂದು ಭಾಷೆಯನ್ನಾಗಿ ಆಧ್ಯಯನ ಮಾಡಲಿ ಆದರೆ ಕನ್ನಡ ಭಾಷೆಯ ಸೊಗಡಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕೆಂದರು.

ಆಂಗ್ಲಭಾಷೆಯ ಮೋಹ ಇಂದು ಎಲ್ಲೆಲ್ಲೂ ಆವರಿಸಿದೆ. ಎಷ್ಟೇ ಭಾಷೆಗಳನ್ನು ಕಲಿತರು ನಮ್ಮ ಕನ್ನಡ ಭಾಷೆಯನ್ನು ಎಂದಿಗೂ ಮರೆಯಬಾರದು. ನಮ್ಮ ಭಾಷೆಯಲ್ಲಿರುವ ಶಬ್ದಗಳ ಬದಲಿಗೆ ಅನ್ಯ ಭಾಷೆಯ ಶಬ್ದಗಳನ್ನು ಬಳಸಿಕೊಳ್ಳುವುದು ಸರಿಯಲ್ಲ; ಆ ಭಾಷೆಗೆ ಸಂವಾದಿಯಾಗಿ ಕನ್ನಡ ಭಾಷೆಯಲ್ಲಿ ಶಬ್ದಗಳು ಇಲ್ಲದಿದ್ದರೆ ಮಾತ್ರ ಅನ್ಯ ಭಾಷೆಯ ಶಬ್ದಗಳನ್ನು ಬಳಸಿಕೊಳ್ಳಬೇಕು. ಕನ್ನಡದಲ್ಲಿರುವ ಶಬ್ದ ಸಂಪತ್ತು ಅನನ್ಯವಾದುದು. ಕನ್ನಡದ ಶಬ್ದಗಳಿಗೆ ಸಂವಾದಿಯಾಗಿ ಇಂಗ್ಲಿಷಿನಲ್ಲಿ ಶಬ್ದಗಳು ಸಿಗುವುದು ದುರ್ಲಭ. ನಮ್ಮ ಭಾರತೀಯ ಕೌಟುಂಬಿಕ ಜೀವನದಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಬಹಳ ಮಹತ್ವವಿದೆ. ಕನ್ನಡದಲ್ಲಿರುವ ಅನೇಕ ಶಬ್ದಗಳಿಗೆ ಸಂವಾದಿಯಾಗಿ ಇಂಗ್ಲಿಷಿನಲ್ಲಿ ಶಬ್ದಗಳು ಸಿಗಲು ಸಾಧ್ಯವಿಲ್ಲ. ‘ತವರುಮನೆ’ ಎನ್ನುವ ಶಬ್ದಕ್ಕೆ ಇಂಗ್ಲಿಷಿನಲ್ಲಿ ಯಾವುದೇ ಸರಿಯಾದ ಸಂವಾದಿ ಶಬ್ದವಿಲ್ಲ. ಕನ್ನಡದಲ್ಲಿ ಅಪಾರವಾದ ಅನುಭವವಿದೆ, ಸಾಹಿತ್ಯವಿದೆ. ಅದನ್ನು ಅಧ್ಯಯನ ಮಾಡುವ ಕೆಲಸ ಆಗಬೇಕಿದೆ. ಸಚಿವ ಆಂಜನೇಯ ಅವರಿಗೆ ಬಸವಣ್ಣ ಮತ್ತು ಮರುಳಸಿದ್ಧ ಅವರ ಬಗ್ಗೆ ಅಪಾರವಾದ ಗೌರವವಿದೆ. ಹೀಗಾಗಿ ಅವರು ವಿಧಾನ ಸೌಧದಲ್ಲಿನ ತಮ್ಮ ಕಛೇರಿಯಲ್ಲಿ ಅವರ ಭಾವಚಿತ್ರಗಳನ್ನು ಹಾಕಿದ್ದಾರೆ. ಅದರಂತೆ ಜಗಳೂರಿನ ಎಲ್ಲ ಕೆರೆಗಳು ತುಂಬುವಂತೆ ಇರುವ ಯೋಜನೆಯನ್ನು ಅವರ ಅಧಿಕಾರವಧಿಯ ಒಳಗೇ ಅನುಮೋದನೆ ನೀಡಿ ಕಾರ್ಯಕಾರಿಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿ ಎಂದರು.

ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ, ಗಂಗಾವತಿ ಪ್ರಾಣೇಶ್, ದಾವಣಗೆರೆಯ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ತಜ್ಞರಾದ ಡಾ. ಬಂದಮ್ಮ ನರೇಂದ್ರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್ ಆಂಜನೇಯ, ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚನ್ನಗಿರಿ ಶಾಸಕರಾದ ವಡ್ನಾಳ್ ರಾಜಣ್ಣ, ವೇದಿಕೆಯ ಮೇಲೆ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮತ್ತು ದಾವಣಗೆರೆಯ ಶ್ರೀ ಪರಮೇಶ್ವರ ಸ್ವಾಮಿಜಿ, ಕಳ್ಳಂಬೆಳ್ಳ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್ ಇದ್ದರು.

– ಹೆಚ್ ಎಸ್ ದ್ಯಾಮೇಶ್