ಚಿತ್ರದುರ್ಗ: ಮಾನವನ ಬದುಕಿನಲ್ಲಿ ಎರಡು ದಾರಿಗಳಿವೆ ಒಂದು ದುರ್ಭಾವನೆ ಮತ್ತೊಂದು ದುರ್ವತನೆ. ಇದರಿಂದ ದುಷ್ಕೃತ್ಯ ಉಂಟಾಗಿ ಸಮಾಜ ಅಶಾಂತಿಯ ಕಡೆಗೆ ಸಾಗುತ್ತದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಆತಂಕ ವ್ಯಕ್ತಪಡಿಸಿದರು.

ರತ್ ಸೈಯದ್ ಅಹ್ಮದ್ ಶಾ ವಲಿ ಚಿಶ್ತಿ ಜಶ್ನೆ ಸಂದಲ್ ಮತ್ತು ಉರುಸ್ ಅಂಗವಾಗಿ ಬಡಾಮಕಾನ್‌ನಲ್ಲಿ ಗುರುವಾರ ನಡೆದ ಸರ್ವಧರ್ಮ ಸದ್ಬಾವನಾ ಗೋಷ್ಠಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ನಡೆಯುವ ದುಷ್ಕೃತ್ಯವನ್ನು ನಿಯಂತ್ರಿಸಬೇಕಾದರೆ ಸದ್ಬಾವನೆಗೆ ಒತ್ತು ಕೊಡಬೇಕಿದೆ.ಸರ್ವ ಧರ್ಮಗಳು ಶಾಂತಿಯ ಸಂದೇಶವನ್ನು ಸಾರುತ್ತಿವೆ. ಧರ್ಮಗಳು ಹೇಳುವ ಮಾನವ ನೀತಿಯನ್ನು ಪ್ರತಿಯೊಬ್ಬರು ಪಾಲಿಸಿದಾಗ ಮಾತ್ರ ಪ್ರೀತಿ ಸೌಹಾರ್ಧತೆ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದರು.

ಬಸವಣ್ಣ, ಪೈಗಂಬರ್, ಬುದ್ದ ಇನ್ನು ಮುಂತಾದ ದಾರ್ಶನಿಕರು ಕಾಯಕಕ್ಕೆ ಹೆಚ್ಚಿನ ಮಹತ್ವ ಕೊಟ್ಟವರು. ಅವರ ತತ್ವ ಸಿದ್ದಾಂತಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಭಾರತ ಬಲಿಷ್ಠ ದೇಶವಾಗಲಿದೆ. ಕಾಯಕ ಇದ್ದಲ್ಲಿ ಶಾಂತಿ ನೆಲೆಸುತ್ತದೆ. ಹಿಂದು-ಮುಸ್ಲಿಂರು ಸಹೋದರರಂತೆ ಜೀವಿಸಿದಾಗ ಕೋಮುಭಾವನೆ ಮತಾಂಧತೆ ಸಂಭವಿಸುವುದಿಲ್ಲ. ಇದರಿಂದ ಆರೋಗ್ಯ ಪೂರ್ಣ ಸಮಾಜ ಕಟ್ಟಬಹುದು ನೀವುಗಳು ಆಹ್ವಾನಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನಾನು ಭಾಗವಹಿಸುತ್ತೇನೆ. ಅದೇ ರೀತಿ ಇದೇ ತಿಂಗಳ ಹದಿನೈದರಂದು ನಡೆಯುವ ಬಸವ ಜಯಂತಿಯಲ್ಲಿ ನೀವುಗಳು ತಪ್ಪದೆ ಪಾಲ್ಗೊಳ್ಳಿ ಎಂದು ಇಸ್ಲಾಂ ಧರ್ಮದವರನ್ನು ಆಹ್ವಾನಿಸಿದರು.
ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲಿಕಾರ್ ಸರ್ವಧರ್ಮ ಸದ್ಬಾವನಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಭಾರತ ದೇಶ ಬಹು ಸಂಸ್ಕೃತಿ, ಬಹುಧರ್ಮ, ಬಹುಭಾಷೆಯಿಂದ ಕೂಡಿದೆ. ಆದರೂ ಚಿಕ್ಕ ಚಿಕ್ಕ ವಿಚಾರಕ್ಕೂ ಒಂದು ರಾಜ್ಯ ಮತ್ತೊಂದು ರಾಜ್ಯಗಳ ನಡುವೆ ಗಲಾಟೆ ನಡೆಯುತ್ತಲೆ ಇದೆ. ಭಾವುಕರಾಗದೆ ದೇಶವನ್ನು ಪ್ರೀತಿಸುವ ಗುಣವನ್ನು ಎಲ್ಲರೂ ಮೊದಲು ಕಲಿಯಬೇಕು ಎಂದು ಕರೆ ನೀಡಿದರು.

ಮನುಷ್ಯನಾಗಿ ಹುಟ್ಟಿದ ಮೇಲೆ ಸಾಯುವತನಕ ಸಮಸ್ಯೆಗಳು ಬರುತ್ತಲೆ ಇರುತ್ತವೆ. ಅದಕ್ಕಾಗಿ ಕಿತ್ತಾಡುವ ಬದಲು ಪರಿಹಾರ ಕಂಡುಕೊಳ್ಳಬೇಕು. ಛತ್ರಪತಿ ಶಿವಾಜಿ, ಭಗತ್‌ಸಿಂಗ್, ಟಿಪ್ಪುಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಇವರುಗಳೆಲ್ಲಾ ದೇಶಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದವರು. ಯಾವ ಧರ್ಮವೂ ಮಾನವ ಕುಲದ ವಿರುದ್ದ ಸಂದೇಶವನ್ನು ನೀಡಿಲ್ಲ. ಒಬ್ಬರ ಮನಸ್ಸನ್ನು ಮತ್ತೊಬ್ಬರು ನೋಯಿಸದಿರುವುದೇ ನಿಜವಾದ ಧರ್ಮ ಎಂದು ಹೇಳಿದರು.

ಸ್ವತಂತ್ರ ಲಿಂಗಾಯಿತ ಧರ್ಮ ಕುರಿತು ಚರ್ಚೆ ನಡೆಯುತ್ತಿದೆ. ಬಸವ ಧರ್ಮ ಇಸ್ಲಾಂ ಧರ್ಮ ಅನ್ಯೋನ್ಯತೆಯಿಂದ ಕೂಡಿದೆ. ಹಾಗಾಗಿ ರಾಜಕೀಯ ಗೊಂದಲಗಳಿಗೆ ಯಾರು ಬಲಿಯಾಗಬೇಡಿ ಜಾಗೃತರಾಗಿರಿ ಎಂದು ತಿಳಿಸಿದರು.
ಬಡಾಮಕಾನ್‌ನ ಮೌಲಾನ ಜುನೈದಿ ಸಖಾಫಿ, ಡಿಜಿಟಲ್ ವರ್ಲ್ಡ್ ಮಾಲೀಕ ದಾದಾಪೀರ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು. ದರ್ಗಾ ಆಡಳಿತ ಮಂಡಳಿಯವರು ಗೋಷ್ಠಿಯಲ್ಲಿ ಹಾಜರಿದ್ದರು.