ಬೆಂಗಳೂರು : ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಉಳಿದಿರುವ ಒಟ್ಟು 3633 ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ.

2015 ರ ಡಿ.31 ಕ್ಕೂ ಹಿಂದೆ ತೆರವಾದ ಹುದ್ದೆಗಗಳ ಭರ್ತಿ ಮಾಡಲಾಗುತ್ತಿದ್ದು, ಲೋಕಸಭೆ ಚುನಾವಣೆಯ ನೀತಿ ಸಂಹಿತೆ ತೆರವಾದ ಬಳಿಕ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಿಕ್ಷಕರ ಹುದ್ದೆಗೆ ಭರ್ತಿಗೆ ಸಂಬಂಧಿಸಿದಂತೆ 2017 ರಲ್ಲಿ ಸರ್ಕಾರ ಕೆಲವು ನಿಯಮ ಜಾರಿಗೆ ತಂದಿದೆ.

ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುದಾನಿತ ಪ್ರೌಢಶಾಲೆಯ ಎಸ್‌ಎಸ್‌ಎಲ್ ಸಿ ಫಲಿತಾಂಶವು ಕಳೆದ ಐದು ಶೈಕ್ಷಣಿಕ ವರ್ಷಗಳ ಜಿಲ್ಲಾ ಸರಾಸರಿ ಫಲಿತಾಂಶಕ್ಕೆ ಸಮನಾಗಿರಬೇಕು ಎಂಬುದು ಇದರಲ್ಲಿ ಪ್ರಮುಖ ಷರತ್ತಾಗಿತ್ತು.

ಸಿಎಂ ಕುಮಾರಸ್ವಾಮಿ ಅವರ ನಿರ್ದೆಶನದಂತೆ 2019 ರ ಜ. 29 ರಂದು ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅನುದಾನಿತ ಪ್ರೌಢಶಾಲೆಯ ಎಸ್ ಎಸ್‌ಎಲ್ ಸಿ ಫಲಿತಾಂಶವು ಕಳೆದ ಐದು ಶೈಕ್ಷಣಿಕ ವರ್ಷಗಳ ಜಿಲ್ಲಾ ಸರಾಸರಿ ಫಲಿತಾಂಶಕ್ಕೆ ಸಮನಾಗಿ ಅಥವಾ ಹೆಚ್ಚಾಗಿ ಇರಬೇಕು ಎಂಬ ಷರತ್ತನ್ನು ಕೈಬಿಡಲಾಯಿತು. ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಉಳಿದಿರುವ ಒಟ್ಟು 3633 ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.